×

ಸಣ್ಣ ನೀರಾವರಿ ಇಲಾಖೆಯಲ್ಲಿ ಪಾರದರ್ಶಕವಾಗಿ ಎಲ್ಲಾ ಗುತ್ತಿಗೆದಾರರಿಗೆ ಹಣ ಬಿಡುಗಡೆ: ಸಚಿವ ಎನ್ ಎಸ್ ಭೋಸರಾಜು

ಬೆಂಗಳೂರು : ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿ ಇಲಾಖೆಯಲ್ಲಿನ ಕಾಮಗಾರಿಗಳಿಗೆ ಹಾಗೂ ಗುತ್ತಿಗೆದಾರರರಿಗೆ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಲಾಗಿದೆ. ಅನುದಾನ ಬಿಡುಗಡೆಗೆ ಮೊದಲ ಬಾರಿಗೆ ಹೊಸ ಪ್ರಯತ್ನ ಮಾಡಲಾಗಿದ್ದು, ಕಳೆದ ಎರಡು ಆರ್ಥಿಕ ವರ್ಷದಲ್ಲಿ 1566 ಕಾಮಗಾರಿಗಳಿಗೆ ಸಂಪೂರ್ಣ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿ/ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ತಾರತಮ್ಯ ಹಾಗೂ ಹಸ್ತಕ್ಷೇಪ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆಧಾರ ರಹಿತ ಆರೋಪ ಮಾಡಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ, ರಾಜ್ಯ ಗುತ್ತಿಗೆದಾರರಲ್ಲಿ ಉಂಟಾಗಿದ್ದ ಗೊಂದಲಗಳನ್ನು ಪರಿಹರಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.

ಗುರುವಾರ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

2023 – 24 ನೇ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಅನುದಾನದ ವಿವರ:

2023-24 ನೇ ಆರ್ಥಿಕ ವರ್ಷದಲ್ಲಿ ನಾವು *ಬಿಜೆಪಿ ಸರಕಾರ, ಹಣಕಾಸಿನ ಲಭ್ಯತೆ ಇಲ್ಲದೇ ಇದ್ದರೂ ಪ್ರಾರಂಭಿಸಿದ್ದ, 12,693 ಕೋಟಿ ರೂಪಾಯಿ ಮೌಲ್ಯದ 15,549 ಕಾಮಾಗಾರಿಗಳನ್ನು ಮುಂದುವರೆಸಿದ್ದೇವೆ. ಈ ವರ್ಷದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸದೆ, ಹಳೆಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ.

ಬಿಜೆಪಿ ಸರಕಾರ ಬಿಟ್ಟು ಹೋಗಿದ್ದ ಅಗಾಧ ಪ್ರಮಾಣದ ಕಾಮಗಾರಿಗಳನ್ನು ನಿಭಾಯಿಸಲು ಹಾಗೂ ಹಣಕಾಸಿನ ಲಭ್ಯತೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮಾಡಿಕೊಂಡ ಮನವಿಯ ಮೇರೆಗೆ ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಮಂಜೂರು ಮಾಡಲಾಯಿತು.

ಹಿಂದಿನ ಸರಕಾರ ಹಣಕಾಸಿನ ಲಭ್ಯತೆಯನ್ನು ತೋರಿಸದೇ, ಅವೈಜ್ಞಾನಿಕವಾಗಿ ಅನುಮತಿ ನೀಡಲಾಗಿದ್ದ ಕಾಮಗಾರಿಗಳನ್ನು ಮುಂದುವರೆಸಲು ಹಾಗೂ ತೊಂದರೆಯಲ್ಲಿದ್ದ ಗುತ್ತಿಗೆದಾರರನ್ನು ಕಾಪಾಡುವ ನಿಟ್ಟಿನಲ್ಲಿ 2000 ಗುತ್ತಿಗೆದಾರರಲ್ಲಿ, 639 ಗುತ್ತಿಗೆದಾರರಿಗೆ ಬಾಕಿ ಇದ್ದ ಸಂಪೂರ್ಣ ಹಣವನ್ನು ಬಿಡುಗೆಡೆ ಮಾಡಲಾಗಿದೆ. ಉಳಿದ 1361 ಗುತ್ತಿಗೆದಾರರಿಗೆ ಭಾಗಶಃ ಹಣವನ್ನು ಬಿಡುಗಡೆ ಮಾಡಲಾಗಿದೆ.

ಪ್ರತಿಯೊಬ್ಬ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ತಾರತಮ್ಯ ಹಾಗೂ ಹಸ್ತಕ್ಷೇಪದ ಪ್ರಶ್ನೆ ಎಲ್ಲಿಂದ ಸಾಧ್ಯ ಎನ್ನುವುದರ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದ್ದಾಗಿ ಸಚಿವರು ತಿಳಿಸಿದರು.

2024-25 ನೇ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆ:

2024-25 ನೇ ಆರ್ಥಿಕ ವರ್ಷದಲ್ಲಿ 9,974.34 ಕೋಟಿ ರೂಪಾಯಿ ಮೌಲ್ಯದ 13,913 ಸ್ಪಿಲ್ ಓವರ್ (ಮುಂದುವರೆದ) ಕಾಮಗಾರಿಗಳು* ಚಾಲ್ತಿಯಲ್ಲಿದ್ದವು. ಕಾಮಗಾರಿಗಳ ಅಗಾಧದತೆ ಹಾಗೂ ಗುತ್ತಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಅನುದಾನ ಮಂಜೂರಾಯಿತು.

ಫೆಬ್ರವರಿ 2025 ಕ್ಕೆ ಬಾಕಿಯಿದ್ದ ಬಿಲ್ ಹಣ 3,352.06 ಕೋಟಿ ರೂಪಾಯಿಗಳು. ಒಟ್ಟಾರೆಯಾಗಿ ಕೈಗೊಳ್ಳಲಾಗಿದ್ದ ಕಾಮಗಾರಿಗಳು 3,176 ಇದರಲ್ಲಿ 267 ಗುತ್ತಿಗೆದಾರರಿಗೆ ಬಾಕಿಯಿದ್ದ ಸಂಪೂರ್ಣ ಹಣವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು.

ಲಭ್ಯವಿದ್ದ ಅನುದಾನದಲ್ಲಿ 2,909 ಕಾಮಾಗಾರಿಗಳಿಗೆ ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ 3,176 ಕಾಮಗಾರಿಗಳಿಗೆ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಲಾಗಿದೆ.

ಮಾರ್ಚ್ 2025 ರಲ್ಲಿ ಬಿಡುಗಡೆಯಾದ ಹಣಕಾಸಿನ ವಿವರ:

ಒಟ್ಟಾರೆಯಾಗಿ 2637 (211 ಗುತ್ತಿಗೆದಾರರು ಹಾಗೂ 2426 ಕಾಮಗಾರಿ) ಕೆಲಸಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 660 (603 ಕಾಮಗಾರಿ ಹಾಗೂ 57 ಗುತ್ತಿಗೆದಾರರಿಗೆ) ಬಾಕಿಯಿದ್ದ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಲಾಗಿದೆ. 1977 (1823 ಕಾಮಗಾರಿ ಹಾಗೂ 154 ಗುತ್ತಿಗೆದಾರರಿಗೆ) ಭಾಗಶಃ ಹಣ ಬಿಡುಗಡೆ ಮಾಡಲಾಗಿದೆ. 2637 ಕಾಮಾಗಾರಿಗಳಿಗೂ ಹಣ ಬಿಡುಗಡೆ ಮಾಡಲಾಗಿದೆ.

ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಹೆಚ್ಚಿನ ಆದ್ಯತೆ:

ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹೆಚ್ಚಾಗಿ ಕಾಮಗಾರಿಗಳನ್ನ ಕೈಗೊಳ್ಳುವಂತಹ ಎಂಓಟಿ (ಕೆರೆಗಳ ಅಧುನಿಕರಣ) ಮತ್ತು ಏಪಿಬಿ (ಅಣೆಕಟ್ಟು ಪಿಕ್ಅಪ್) ಯ ಹೆಡ್ ಆಫ್ ಅಕೌಂಟ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಎಂಓಟಿ (ಕೆರೆಗಳ ಅಧುನಿಕರಣ) ಲೆಕ್ಕಶೀರ್ಷಿಕೆಗೆ ಆಯವ್ಯದಲ್ಲಿ ಹಂಚಿಕೆ ಮಾಡಲಾದ ಹಣ 100 ಕೋಟಿ ರೂಪಾಯಿಗಳು ಹೆಚ್ಚುವರಿಯಾಗಿ 210 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲಾಗಿದೆ.

ಏಪಿಬಿ (ಅಣೆಕಟ್ಟು ಪಿಕ್ಅಪ್) ಲೆಕ್ಕಶೀರ್ಷಿಕೆಗೆ ಆಯವ್ಯಯದಲ್ಲಿ ಹಂಚಿಕೆ ಮಾಡಲಾದ ಹಣ 120 ಕೋಟಿ ರೂಪಾಯಿಗಳು ಹೆಚ್ಚುವರಿಯಾಗಿ 335 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಲಾಗಿದೆ.

ಎಲ್ಐಎಸ್ – ಏತನೀರಾವರಿ ಲೆಕ್ಕಶೀರ್ಷಿಕೆಗೆ ಆಯವ್ಯಯದಲ್ಲಿ 650 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 252.50 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಪಶ್ಚಿಮವಾಹಿನಿ ಲೆಕ್ಕಶೀರ್ಷಿಕೆಗೆ ಆಯವ್ಯಯದಲ್ಲಿ 100 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಇದನ್ನ ಗಮನಿಸಿದರೆ, ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರು ಹೆಚ್ಚಾಗಿರುವಂತಹ ಲೆಕ್ಕಶೀರ್ಷಿಕೆಗಳಿಗೆ ಹೆಚ್ಚುವರಿಯಾಗಿ ಲಭ್ಯವಾದ ಹಣದಲ್ಲಿ ಶೇಕಡಾ 55 ಕ್ಕೂ ಹೆಚ್ಚು ಭಾಗವನ್ನು ಮೀಸಲಿಡಲಾಗಿದೆ.

ಅಲ್ಲದೇ, ಎಂಓಟಿ (ಕೆರೆಗಳ ಆಧುನೀಕರಣ) ಲೆಕ್ಕಶೀರ್ಷಿಕೆಯಲ್ಲಿ ಇರುವ ಎಲ್ಲಾ ಕಾಮಗಾರಿಗಳ/ಗುತ್ತಿಗೆದಾರರಿಗೆ ಡಿಸೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಒಟ್ಟಾರೆಯಾಗಿ ಶೇಕಡಾ 25 ರಷ್ಟು, ಏಪಿಬಿ – ಅಣೆಕಟ್ಟು ಪಿಕಪ್ ಲೆಕ್ಕಶೀರ್ಷಿಕೆಯಲ್ಲಿ ಇರುವ ಎಲ್ಲಾ ಕಾಮಗಾರಿಗಳ/ಗುತ್ತಿಗೆದಾರರಿಗೆ ಡಿಸೇಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಶೇಡಕಾ 31 ರಷ್ಟು, ಎಸ್ಸಿಪಿ, ಟಿಎಸ್ಪಿ ಹಾಗೂ ನಬಾರ್ಡ್ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವಂತಹ ಕಾಮಗಾರಿಗಳ ಬಾಕಿ ಬಿಲ್ಲಿನ ಶೇಕಡಾ 100 ರಷ್ಟು ಹಣವನ್ನು ನೀಡಲಾಗಿದೆ.

ನಮ್ಮ ಇಲಾಖೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿರುವಂತಹ ಎಲ್ಲಾ ಅಂದರೆ ಶೇಕಡಾ 100 ರಷ್ಟು ಕಾಮಗಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ. ಯಾವುದೇ ಒಬ್ಬ ಗುತ್ತಿಗೆದಾರರು/ಕಾಮಗಾರಿಗೆ ಹಣ ಬಿಡುಗಡೆ ಆಗಿಲ್ಲ ಎನ್ನುವುದನ್ನ ತೋರಿಸಲಿ ಎಂದು ಸಚಿವರು ಸವಾಲ್ ಹಾಕಿದರು.

ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪದ ಸಾಧ್ಯತೆಯೇ ಇಲ್ಲ. ಕಾಮಗಾರಿಗಳು ಸಕಾಲದಲ್ಲಿ ಮುಗಿಯಬೇಕು ಹಾಗೂ ಗುತ್ತಿಗೆದಾರರು ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವ ಉದ್ದೇಶದಿಂದ ನಾವು ಅನುದಾನದ ಲಭ್ಯತೆಯನ್ನು ನೋಡಿಕೊಂಡು ಹಣ ಬಿಡುಗಡೆ ಮಾಡುತ್ತಿದ್ದೇವೆ.

ಬಾಕಿ ಇರುವ ಎಲ್ಲಾ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಜೇಷ್ಠತೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಜೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಿದ್ದಲ್ಲಿ ಇದುವರೆಗೂ ಲಭ್ಯವಾದಂತಹ ಹಣಕಾಸಿನ ಲಭ್ಯತೆಯಲ್ಲಿ ಕೇವಲ ಕೆಲವೇ ಗುತ್ತಿಗೆದಾರರು/ಕಾಮಗಾರಿಗೆ ಮಾತ್ರ ಹಣ ನೀಡಲು ಸಾಧ್ಯವಾಗುತ್ತಿತ್ತು. ಯಾವುದೇ ತಾರತಮ್ಯ ವಿಲ್ಲದೇ ಪಾರದರ್ಶಕತೆಯಿಂದ, ನಮ್ಮನ್ನು ಭೇಟಿಯಾದ ಹಾಗೂ ಭೇಟಿಯಾಗದೇ ಇರುವಂತಹ ಎಲ್ಲಾ ಗುತ್ತಿಗೆದಾರರಿಗೂ ಸಮಾನವಾಗಿ ಹಣ ಬಿಡುಗಡೆ ಆಗಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವಂತಹ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಅಂತಹ ಘಟನೆಗಳು ಇದ್ದಲ್ಲಿ ಸಕ್ಷಮ ಪ್ರಾಧಿಕಾರದಲ್ಲಿ ದೂರು ಸಲ್ಲಿಸುವಂತೆಯೂ ತಿಳಿಸಲಾಗಿದೆ ಎಂದರು.

ನಿನ್ನೆ ನಡೆದ ಸಭೆಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಲ್ಲಿ ಇದ್ದಂತಹ ಎಲ್ಲಾ ಗೊಂದಲಗಳನ್ನು ನಿವಾರಿಸಲಾಗಿದೆ. ಜೇಷ್ಠತೆ ಆಧಾರದಲ್ಲಿ ಬಾಕಿ ಇರುವಂತಹ ಎಲ್ಲಾ ಬಿಲ್ ಗಳನ್ನು ಪಾವತಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡರು. ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲಾಗಿದೆ.

ನನ್ನ ಇಲಾಖೆಯಲ್ಲಿ ಯಾರದ್ದೂ ಹಸ್ತಕ್ಷೇಪ ಇಲ್ಲ, ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಹಿತರಕ್ಷಣೆಯ ಜೊತೆಯಲ್ಲಿಯೇ ಕಾಮಗಾರಿಗಳು ಸುಗಮವಾಗಿ ಮುಂದುವರೆಯುಂತಹ ಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ. ಇದರ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಗುತ್ತಿಗೆದಾರರು ಈ ಸಣ್ಣ ನೀರಾವರಿ ಇಲಾಖೆಯಲ್ಲಿ ಹಣಕಾಸಿನ ಬಿಡುಗಡೆಯ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸಹಮತಿ ವ್ಯಕ್ತಪಡಿಸಿದ್ದಾರೆ. ಮಾಹಿತಿ ಇಲ್ಲದೇ ಅನಗತ್ಯ ಹೇಳಿಕೆ ನೀಡುವ ಮೂಲಕ ಗೊಂದಲ ಉಂಟುಮಾಡುವುದನ್ನು ಕೈಬಿಡುವಂತೆಯೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಾದ ರಾಘವನ್ ಉಪಸ್ಥಿತರಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed