“ಮಗುವನ್ನು ಅಳಿಸಿ ತೊಟ್ಟಿಲು ತೂಗುತ್ತಿರುವ ಬಿಜೆಪಿ”
ಬೆಂಗಳೂರು: ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ಆಧಾರದ ಮೇಲೆ ತೆರಿಗೆ ನೋಟಿಸ್ ನೀಡುತ್ತಿರುವ ಸಂಬಂಧವಾಗಿ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, “ಈ ಸಮಸ್ಯೆಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಬಿಜೆಪಿಯ ರಾಜಕೀಯ ಕುತಂತ್ರ,” ಎಂದು ಹರಿಹಾಯ್ದಿದ್ದಾರೆ.
“ಮಗುವನ್ನು ಅಳಿಸುತ್ತಿರುವುದು ಬಿಜೆಪಿಯೇ, ನಂತರ ತೊಟ್ಟಿಲು ತೂಗುವುದೂ ಅವರೇ. ಈ ಮೆಲೋಡ್ರಾಮಾವನ್ನು ಇನ್ನಷ್ಟು ಎಷ್ಟು ಕಾಲ ಮುಂದುವರಿಸುವ ಇರಾದೆಯಿದೆ?” ಎಂಬ ಶಬ್ದಗಳಲ್ಲಿ ಸಚಿವರು ಬಿಜೆಪಿ ನಿಲುವಿನ ವಿರುದ್ಧ ಕಿಡಿಕಾರಿದ್ದಾರೆ.
ಜಿಎಸ್‌ಟಿ ವ್ಯವಸ್ಥೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿದ್ದು, ಜಿಎಸ್‌ಟಿ ಕೌನ್ಸಿಲ್ ಕೂಡ ಕೇಂದ್ರದ ಅಧೀನದಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದಾರೆಯೇ? ಅಥವಾ ಇದನ್ನು ತಿಳಿದರೂ ಜನರನ್ನು ದಾರಿ ತಪ್ಪಿಸಲು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆಯೇ ಎಂಬ ಪ್ರಶ್ನೆ ಸಚಿವರು ಎತ್ತಿದ್ದಾರೆ.
“ಜಿಎಸ್‌ಟಿ ಕೌನ್ಸಿಲ್‌ನ ತೀರ್ಮಾನಗಳಿಗೆ ರಾಜ್ಯ ಸರ್ಕಾರ ನೇರ ಹೊಣೆಗಾರರಲ್ಲ. ಆದ್ದರಿಂದ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಬಿಜೆಪಿ ಪ್ರಯತ್ನ ಫಲಿಸುವುದಿಲ್ಲ,” ಎಂದ ಅವರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ನಿಜವಾದ ಸಹಾಯ ಮಾಡಬೇಕೆಂದಿರುವುದಾದರೆ, ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಬಳಿ ಹೋಗಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
“ವ್ಯಾಪಾರಿಗಳಿಗೆ ಉಚಿತವಾಗಿ ಅಡಿಟರ್ ಸಲಹೆ ನೀಡುವುದಾಗಿ ಜಾಹೀರಾತು ಹಾಕುವ ಮೂಲಕ ತಮ್ಮ ಮಾನ, ಮಾರ್ಯಾದೆ ಇನ್ನಷ್ಟು ಕಳೆದುಕೊಳ್ಳಬೇಡಿ. ನಾಚಿಕೆ, ಸತ್ಯ ಮತ್ತು ಜವಾಬ್ದಾರಿ ಎಂಬ ಪದಗಳಿಗೆ ಅರ್ಥವಿರುವ ಪಕ್ಷವಲ್ಲವಾದರೆ ಬೇರೇನು ನಿರೀಕ್ಷಿಸಬಹುದು?” ಎಂದು ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ ಸಚಿವರು, ರಾಜಕೀಯ ಪ್ರಾಮಾಣಿಕತೆಗೆ ಬೇಕಾದ ಧೈರ್ಯವನ್ನು ಬೆಳೆಸಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.



Post Comment