×

ಬೆಂಗಳೂರು: ಮೃತ ಸಾರಿಗೆ ಸಿಬ್ಬಂದಿಗಳ ಕುಟುಂಬಗಳಿಗೆ ರೂ. 8.22 ಕೋಟಿ ಪರಿಹಾರ ವಿತರಣೆ

ಬೆಂಗಳೂರು, ಮಾರ್ಚ್ 6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮೃತ ಸಾರಿಗೆ ಸಿಬ್ಬಂದಿಗಳ ಅವಲಂಬಿತರಿಗೆ ಒಟ್ಟು ರೂ. 8.22 ಕೋಟಿ ಪರಿಹಾರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಅಪಘಾತದಿಂದ ಮೃತಪಟ್ಟ 4 ಸಿಬ್ಬಂದಿಗಳ ಕುಟುಂಬಗಳಿಗೆ ತಲಾ ರೂ. 1 ಕೋಟಿಯಂತೆ ಒಟ್ಟು ರೂ. 4 ಕೋಟಿ ಪರಿಹಾರ ವಿತರಿಸಲಾಯಿತು. ಇನ್ನು ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 28 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ. 14 ಲಕ್ಷದಂತೆ ಒಟ್ಟು ರೂ. 3.92 ಕೋಟಿ ಪರಿಹಾರ ನೀಡಲಾಯಿತು. ಜೊತೆಗೆ 3 ಸಿಬ್ಬಂದಿಗಳ ಕುಟುಂಬಗಳಿಗೆ ತಲಾ ರೂ. 10 ಲಕ್ಷದಂತೆ ಒಟ್ಟು ರೂ. 30 ಲಕ್ಷ ಪರಿಹಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆಯ ಸಿಬ್ಬಂದಿಗಳ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ “ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆ” ಜಾರಿಗೆ ತಂದಿರುವುದಾಗಿ ತಿಳಿಸಿದರು. ಈ ಯೋಜನೆಯಡಿ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲೂ ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಕುಟುಂಬಗಳಿಗೆ ರೂ. 1 ಕೋಟಿ ಅಪಘಾತ ವಿಮಾ ಪರಿಹಾರ ನೀಡಲಾಗುತ್ತಿದೆ. ಇದುವರೆಗೆ 34 ಪ್ರಕರಣಗಳಲ್ಲಿ ಕುಟುಂಬಗಳಿಗೆ ಒಟ್ಟು ರೂ. 34 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

ಅದೇ ರೀತಿ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಸೇರಿದಂತೆ ಇತರೆ ಕಾರಣಗಳಿಂದ ಮೃತಪಟ್ಟ ಸಿಬ್ಬಂದಿಗಳ ಕುಟುಂಬಗಳಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ. ಮೊದಲು ಇದ್ದ ರೂ. 3 ಲಕ್ಷವನ್ನು ರೂ. 10 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ನಂತರ 2025ರ ಸೆಪ್ಟೆಂಬರ್ 1ರಿಂದ ರೂ. 14 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಮೃತ ಸಿಬ್ಬಂದಿಗಳ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಚಾಲಕ, ನಿರ್ವಾಹಕ, ಕರಾಸಾ ಪೇದೆ ಮತ್ತು ತಾಂತ್ರಿಕ ಸಿಬ್ಬಂದಿ ಹುದ್ದೆಗಳಿಗೆ ತ್ವರಿತವಾಗಿ ನೇಮಕ ಮಾಡಲಾಗುತ್ತಿದೆ. ಅಗತ್ಯ ವಿದ್ಯಾರ್ಹತೆ ಇದ್ದರೆ ಕಿರಿಯ ಸಹಾಯಕ ಹುದ್ದೆಗೂ ಜೇಷ್ಠತೆ ಆಧಾರದ ಮೇಲೆ ಅವಕಾಶ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇಲ್ಲಿಯವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಸುಮಾರು 1400 ಮಂದಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ ಎಂದು ಅವರು ತಿಳಿಸಿದರು. ಮೃತ ಸಿಬ್ಬಂದಿಗಳ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ನೀಡಿರುವ ಪರಿಹಾರ ಮೊತ್ತವನ್ನು ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಅಥವಾ ಬ್ಯಾಂಕ್‌ನಲ್ಲಿ FD ಇಡುವಂತಹ ಸುರಕ್ಷಿತ ಹೂಡಿಕೆಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮೊಹಮ್ಮದ್ ರಿಜ್ವಾನ್ ನವಾಬ್ (ಉಪಾಧ್ಯಕ್ಷರು), ಅಕ್ರಂ ಪಾಷಾ (ವ್ಯವಸ್ಥಾಪಕ ನಿರ್ದೇಶಕರು), ಗಾಯತ್ರಿ ಕೆ.ಎಂ. (ನಿರ್ದೇಶಕಿ) ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed