ಕೊಚ್ಚಿನ್, ಮಾರ್ಚ್ 31:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ಪರಿಣಾಮಕಾರಿ ತರಬೇತಿ ಕಾರ್ಯಕ್ರಮಗಳಿಗಾಗಿ ಪ್ರತಿಷ್ಠಿತ World HRD Congress Award-2026 ನಲ್ಲಿ Best in Training and Organisation Development ವರ್ಗದಲ್ಲಿ ಗೌರವಾನ್ವಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ನಿಗಮದ ವ್ಯಾಪ್ತಿಯಲ್ಲಿರುವ ಐದು ತರಬೇತಿ ಕೇಂದ್ರಗಳಲ್ಲಿ ವಿವಿಧ ಮಾದರಿಯ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದು ಈ ಪ್ರಶಸ್ತಿಗೆ ಕಾರಣವಾಗಿದೆ. ಇಂಧನ ಕ್ಷಮತೆ, ಪುನಃಶ್ಚೇತನ, ಅಪಘಾತ ರಹಿತ ಚಾಲನಾ ತರಬೇತಿ, ರಸ್ತೆ ಸುರಕ್ಷತೆ, ಸಿಮ್ಯುಲೇಟರ್ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ನಡೆಸಲಾಗಿದೆ.
ಇದರೊಂದಿಗೆ ಪಿ.ಎಂ. ಅಜಯ್ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ಹಾಗೂ ಉಚಿತ ಚಾಲನಾ ಪರವಾನಗಿ ವಿತರಣೆ, ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ ಮತ್ತು ಪರವಾನಗಿ ವಿತರಣೆ, ಖಾಸಗಿ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನೂ ಕೈಗೊಂಡಿದೆ.
ಹೊಸ ಚಾಲಕ-ಕಂ-ನಿರ್ವಾಹಕರು, ಕರಾಸಾ ಪೇದೆಗಳು, ಕಿರಿಯ ಸಹಾಯಕರುಗಳಿಗೆ ವೃತ್ತಿ ಪರಿಚಯ ಮತ್ತು ಕರ್ತವ್ಯ-ಜವಾಬ್ದಾರಿ ತರಬೇತಿ, ಮೇಲ್ವಿಚಾರಕ ಸಿಬ್ಬಂದಿಗಳಿಗೆ ವಿಶೇಷ ತರಬೇತಿ, ಆಡಳಿತ ಸಿಬ್ಬಂದಿಗಳಿಗೆ ಪುನಃಶ್ಚೇತನ ತರಬೇತಿ ಸೇರಿದಂತೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕಳೆದ ಆರು ತಿಂಗಳಲ್ಲಿ 12,000 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ತರಬೇತಿ ನೀಡಿರುವುದು ನಿಗಮದ ಸಾಧನೆಯಾಗಿದೆ.
ಕೊಚ್ಚಿನ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ಯಾಪ್ಟನ್ ಎಸ್.ಟಿ. ಶ್ರೀಧರನ್, ನಿರ್ದೇಶಕರು, College of Ship Technology ಅವರು ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಲತಾ ಟಿ.ಎಸ್., ಮಂಡಳಿ ಕಾರ್ಯದರ್ಶಿ/ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಎ.ಎಸ್. ಗೀತಾಂಜಲಿ, ಪ್ರಾಂಶುಪಾಲರು, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ಅವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.



Post Comment