ಬೆಂಗಳೂರು: ನಗರದಲ್ಲಿ ಉಂಟಾಗಿರುವ LPG (ಆಟೋ ಗ್ಯಾಸ್) ಕೊರತೆ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಉಲ್ಲೇಖಿಸಿ ಪ್ರಶ್ನೆ ಎತ್ತಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಮೆಟ್ರೋ ದರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ವಿರೋಧವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದವರು, ಈಗ ಆಟೋ ಚಾಲಕರ ಸಂಕಷ್ಟದ ಸಮಯದಲ್ಲಿ ಮೌನವಾಗಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ನಗರದ ಲಕ್ಷಾಂತರ ಆಟೋ ಚಾಲಕರು LPG ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಹಲವರು ಉದ್ಯೋಗ ನಡೆಸಲು ಸಾಧ್ಯವಾಗದೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸರ್ಕಾರದ ಆಡಳಿತ ಇದ್ದರೂ, ಬೆಂಗಳೂರಿಗೆ ಅಗತ್ಯವಿರುವ ಗ್ಯಾಸ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ನಾಯಕರು “ಟ್ವಿಟರ್ ರಾಜಕೀಯ”ದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಬೆಂಗಳೂರು ಸಿನಿಮಾ ಸೆಟ್ ಅಲ್ಲ, ಇದು ಕೋಟಿ ಜನರ ಬದುಕಿನ ಕೇಂದ್ರವಾಗಿದೆ. ತಕ್ಷಣ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದ್ದಾರೆ.



Post Comment