ಬೆಂಗಳೂರು: ಯುವ ಕವಯಿತ್ರಿ ಹಾಗೂ ಲೇಖಕಿ ಅಮನ ಜೆ ಕುಮಾರ್ ಅವರ ಐದನೇ ಕೃತಿ “ದಿ ಮಿಸ್ಟಿಕಲ್ ವೇವ್ಸ್” ಅನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮ ಸಾಹಿತ್ಯ ಹಾಗೂ ವಿಜ್ಞಾನ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಪ್ರಸ್ತುತ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಗೌರವಾಧ್ಯಕ್ಷರಾಗಿದ್ದು, ಲೈನಸ್ ಪಾಲಿಂಗ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾಗಿದ್ದಾರೆ. ಜೊತೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

“ದಿ ಮಿಸ್ಟಿಕಲ್ ವೇವ್ಸ್” ಕವನ ಸಂಕಲನಕ್ಕೆ ಅಂತರರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್ ಅವರು ಮುನ್ನುಡಿ ಬರೆದಿರುವುದು ಕೃತಿಗೆ ವಿಶೇಷ ಮೆರುಗು ತಂದಿದೆ.
ಈ ಕೃತಿ ಜೀವನದ ಅನುಭವಗಳು, ಭಾವನೆಗಳು, ನಿರೀಕ್ಷೆಗಳು ಮತ್ತು ಆತ್ಮಚಿಂತನೆಯ ಸಂಯೋಜನೆಯಾಗಿದ್ದು, ಬ್ಲ್ಯಾಕ್ಔಟ್ ಕವನಗಳು ಹಾಗೂ ಸೊನೆಟ್ಗಳ ವಿಶಿಷ್ಟ ಶೈಲಿಯಲ್ಲಿ ಮೂಡಿಬಂದಿದೆ. ಕಡಿಮೆ ಪದಗಳಲ್ಲಿ ಗಾಢ ಅರ್ಥಗಳನ್ನು ಹೊತ್ತಿರುವ ಈ ಕವನ ಸಂಕಲನ ಓದುಗರ ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತದೆ ಎಂದು ಸಾಹಿತ್ಯಾಸಕ್ತರು ಅಭಿಪ್ರಾಯಪಟ್ಟಿದ್ದಾರೆ.

ಅಮನ ಜೆ ಕುಮಾರ್ ಇತ್ತೀಚೆಗೆ ಆರ್.ವಿ. ಪಿಯು ಕಾಲೇಜು, ಜಯನಗರದಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಟಿ.ಎಸ್. ಲತಾ ಅವರ ಪುತ್ರಿಯಾಗಿದ್ದಾರೆ.
ಅವರು ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ, ಕೇವಲ 11ನೇ ವಯಸ್ಸಿನಲ್ಲಿ ಕವನ ಹಾಗೂ ಸಾಹಿತ್ಯ ರಚನೆಗೆ ಚಾಲನೆ ನೀಡಿದ್ದರು.
ಇದುವರೆಗೆ ಅಮನ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿದ್ದು, “Echoes of Soulful Poems”, “World Amidst the Words”, “Lafzon Ki Mehphil” ಹಾಗೂ “Galore of Mysteries” ಓದುಗರಿಂದ ಉತ್ತಮ ಮೆಚ್ಚುಗೆ ಪಡೆದಿವೆ. ಅವರ ಅನೇಕ ಲೇಖನಗಳು, ಕವನಗಳು ಹಾಗೂ ಕಥೆಗಳು ಮುದ್ರಣ, ವಿದ್ಯುನ್ಮಾನ ಮತ್ತು ಆನ್ಲೈನ್ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.

ಅಮನ ಜೆ ಕುಮಾರ್ ತಮ್ಮ ಸಾಹಿತ್ಯ ಸಾಧನೆಗಾಗಿ India Book of Records, Asia Book of Records ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ವಿಶ್ವದಾಖಲೆಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಕಿರಿಯ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಅವರು ಯುವ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ.



Post Comment