ಚಾಲಕನ ಸಾವಿಗೆ ಕಂಬನಿ ಮಿಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ; ಕೂಡಲೇ ಅವಲಂಬಿತರಿಗೆ ನೌಕರಿ, ಆರ್ಥಿಕ ಸೌಲಭ್ಯ ನೀಡಲು ಸೂಚನೆ
ಬೆಂಗಳೂರು: ಮಾನವೀಯತೆಯ ಅದ್ಭುತ ಮಾದರಿ ಮೂಡಿಸಿ, ಸಾವಿನಲ್ಲಿಯೂ ಪ್ರಯಾಣಿಕರ ಜೀವ ಉಳಿಸಿದ ಕೆಎಸ್‌ಆರ್‌ಟಿಸಿ ಚಾಲಕ ರಾಜೀವ್ ಬೀರಸಾಲ ಅವರ ದುಃಖದ ನಿಧನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರು ರಾಮಲಿಂಗಾ ರೆಡ್ಡಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇಂದು ಸಚಿವರು ರಾಜೀವ್ ಬೀರಸಾಲ ಅವರ ಆತ್ಮಕ್ಕೆ ಶಾಂತಿ ಕೋರಿ, ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರಾಜೀವ್ ಬೀರಸಾಲ (ವಯಸ್ಸು: 56), ಹರಿಹರ ಘಟಕದ ಅನುಸೂಚಿ ಸಂಖ್ಯೆ 47 BA (ರಾಜಹಂಸ), ಬಸ್ಸು ನಂ. 2469 ಚಾಲಕರಾಗಿದ್ದರು. ಅವರು 23 ಫೆಬ್ರವರಿ 2005ರಿಂದ ಸೇವೆಯಲ್ಲಿ ನಿರತರಾಗಿದ್ದರು. ಕಳೆದ ದಿನ ಬೆಂಗಳೂರಿನಿಂದ ದಾವಣಗೆರೆ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ನೆಲಮಂಗಲ ಟೋಲ್ ಹತ್ತಿರ ಹೃದಯಾಘಾತದಿಂದ ತೀವ್ರ ಸ್ಥಿತಿಗೆ ಒಳಗಾಗಿದರು. ಆದರೆ, ತಮ್ಮ ಶ್ರೇಷ್ಠ ಧೈರ್ಯದಿಂದ, ಬಸ್ಸನ್ನು ಹೆದ್ದಾರಿಯ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿ, ಪ್ರಯಾಣಿಕರ ಜೀವ ರಕ್ಷಿಸಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ನೆಲಮಂಗಲ ಆಸ್ಪತ್ರೆಯಲ್ಲಿ ಅವರು ನಿಧನರಾದರು.
ಮೃತ ಚಾಲಕನ ಕುಟುಂಬಕ್ಕೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು, ಹಾಗೂ ಅವರ ಅವಲಂಬಿತರಿಗೆ ನೌಕರಿ ಒದಗಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
Post Comment