ಬಸ್ಸು ಅಪಘಾತದ ಬಗ್ಗೆ ನಿರ್ಲಕ್ಷ್ಯ; ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ
ಬೆಂಗಳೂರು: ಇಂದು ಬಿ.ಎಂ.ಟಿ.ಸಿ ಸಂಸ್ಥೆಯಲ್ಲಿ 2286 ನಿರ್ವಾಹಕರಿಗೆ ನೇಮಕಾತಿ ಆದೇಶಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು 2018ರಿಂದ ಇಂದಿನವರೆಗೆ ಬಿ.ಎಂ.ಟಿ.ಸಿ.ಯಲ್ಲಿ ಯಾವುದೇ ನೇಮಕಾತಿ ಆಗಿಲ್ಲ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈಗಾಗಲೇ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 9000 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ 4700 ನೇರ ನೇಮಕಾತಿ ಹಾಗೂ 1000 ಅನುಕಂಪದ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದೆ. ಉಳಿದ ನೇಮಕಾತಿಗಳು ಶೀಘ್ರದಲ್ಲೇ ಮುಗಿಯಲಿವೆ,” ಎಂದು ಅವರು ತಿಳಿಸಿದರು.

ಸಚಿವರು ಬಸ್ ಅಪಘಾತಗಳ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿ, “ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯದಿಂದ ಅಪಘಾತಗಳು ಹೆಚ್ಚುತ್ತಿವೆ. ತಾಂತ್ರಿಕ ದೋಷಗಳಿಂದ ಸಂಭವಿಸುವ ಅಪಘಾತಗಳಿಗೆ ಈಗಿನಿಂದ ಚಾಲಕರನ್ನು ಮಾತ್ರವಲ್ಲ, ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರನ್ನು ಹೊಣೆಗಾರರನ್ನಾಗಿಸಲಾಗುವುದು,” ಎಂದು ಹೇಳಿದರು.
ಚಾಲಕರು ಹಾಗೂ ನಿರ್ವಾಹಕರು ತಮ್ಮ ಕರ್ತವ್ಯವನ್ನು ತಾಳ್ಮೆಯಿಂದ, ಜವಾಬ್ದಾರಿಯಿಂದ ನಿರ್ವಹಿಸಬೇಕು. ರಸ್ತೆ ಸುರಕ್ಷೆ ಅಭಿಯಾನಗಳ ಮೂಲಕ ಅಪಘಾತ ತಡೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ,” ಎಂದು ಹೇಳಿದರು.
Post Comment