ಬೆಂಗಳೂರು: ಬ್ಯಾಟರಾಯನಪುರದ ಪ್ರಸಿದ್ಧ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆರ್ಥಿಕ ಅವ್ಯವಹಾರ, ದುರುಪಯೋಗ ಮತ್ತು ಆಡಳಿತದ ಅಸಮರ್ಪಕತೆಗೆ ಸಂಬಂಧಿಸಿದಂತೆ ಗಣನೀಯ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರವು ಗಂಭೀರವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಂಡಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಲಂ 42 ಮತ್ತು 43ರನ್ವಯ, ದಿನಾಂಕ 08-07-2025ರಂದು ಹೊರಡಿಸಿದ ಆದೇಶದ ಮೂಲಕ ಈ ದೇವಾಲಯವನ್ನು ಘೋಷಿತ ಸಂಸ್ಥೆ ಎಂದು ಘೋಷಿಸಿ, ದಿನಾಂಕ 11-07-2025ರಂದು ಸರ್ಕಾರಿ ಅಧಿಕಾರಿಗಳು, ಅರ್ಚಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮಹಜರ್ ನಡೆಸಿ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆದಿದೆ.
ಈ ಕ್ರಮವು ತಾತ್ಕಾಲಿಕವಾಗಿ 5 ವರ್ಷಗಳವರೆಗೆ ಜಾರಿಗೆ ಇರುತ್ತದೆ. ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ದೇವಾಲಯದ ಆಡಳಿತ ಮಂಡಳಿಯವರು ಕಳೆದ 25 ವರ್ಷಗಳಿಂದ ಯಾವುದೇ ಸರಿಯಾದ ಲೆಕ್ಕಪತ್ರಗಳು, ದಾಖಲೆಗಳು ಇರದೆ, ಆದಾಯವನ್ನು ಬಚ್ಚಿಟ್ಟುಕೊಂಡು ವೆಚ್ಚದ ಮಾಹಿತಿಯನ್ನು ಮಾತ್ರ ನೀಡಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹುಂಡಿಯ ಹಣ ಲಪಟಾಯಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಭಕ್ತರಲ್ಲಿ ಆಕ್ರೋಶ ಮೂಡಿಸಿತ್ತು.
ಇನ್ನೂ ಹೆಚ್ಚಿನ ಆಘಾತಕಾರಿ ವಿಷಯವೆಂದರೆ, ಹಣ ಕಳವುಗೆ ಸಂಬಂಧಿಸಿದ ದೃಢ ಸಾಕ್ಷ್ಯಗಳು ಇದ್ದರೂ ಆಡಳಿತ ಮಂಡಳಿಯವರು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ, ವಿಚಾರಣಾ ಸಮಿತಿ ರಚಿಸಿ ಪರಿಶೀಲನೆಗೂ ಮುಂದಾಗಿಲ್ಲ.
ಈ ಪೈಪೋಟಿಯಲ್ಲಿ ಬಯಲಾಗುತ್ತಿರುವ ಅಕ್ರಮ, ಭಕ್ತರ ಭಾವನೆಗೆ ಅಪಚಾರ, ಹಣದ ದುರುಪಯೋಗ, ಇವೆಲ್ಲವನ್ನು ನಿಗ್ರಹಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಭಕ್ತ ಸಮುದಾಯದಿಂದ ಬಹುಮಾನ್ಯ ಬೆಂಬಲ ವ್ಯಕ್ತವಾಗಿದೆ.
“ದೇವರ ದುಡ್ಡು ದೇವರಿಗೆ ಸೇರಬೇಕು” ಎಂಬ ಆಧ್ಯಾತ್ಮಿಕ ನಂಬಿಕೆಯನ್ನು ಕಲಂಕಿತಗೊಳಿಸಿರುವ ಈ ಘಟನೆ ಧರ್ಮ ಮತ್ತು ನ್ಯಾಯದ ವಿರುದ್ಧದ ದುಷ್ಕೃತ್ಯ ಎಂಬ ಭಾವನೆ ಭಕ್ತರಲ್ಲಿ ಮನೆಮಾಡಿದೆ.
ಸರ್ಕಾರದ ಈ ದೃಢ ಕ್ರಮ ಭಕ್ತರ ಹಿತಕ್ಕೆ, ದೇವಾಲಯದ ಶುದ್ಧತೆಯ ಸ್ಥಾಪನೆಗೆ ದಾರಿಯಾಗಲಿ ಎಂಬುದು ಸಾರ್ವಜನಿಕರ ಆಶಯ.
Post Comment