ಸಾರಿಗೆ ಸಂಸ್ಥೆಯ ಆಸ್ತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಸಚಿವ ರಾಮಲಿಂಗಾ ರೆಡ್ಡಿ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ತನ್ನ ಆಸ್ತಿಗಳ ಡಿಜಿಟಲೀಕರಣದ ಮೂಲಕ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಕಂದಾಯ ಇಲಾಖೆಯ ಲ್ಯಾಂಡ್ ಬೀಟ್ ಆ್ಯಪ್ ಬಳಸಿ ಭೂಮಿ ಹಾಗೂ ದಾಖಲೆಗಳನ್ನು ನಕ್ಷೆಗೊಳಿಸಿ ಸರ್ವೆ ಮಾಡಲಾಗುತ್ತಿದೆ.
ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಒಟ್ಟು 255 ಆಸ್ತಿಗಳ 683.20 ಎಕರೆ ಭೂಮಿ ಇದ್ದು, ಇದರ ಮೌಲ್ಯವನ್ನು ರೂ. 2500 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೆಲವೆಡೆ ಈಗಾಗಲೇ ಒತ್ತುವರಿಯಾಗಿದ್ದು, ಇನ್ನೂ ಹಲವೆಡೆ ಒತ್ತುವರಿ ಹಂತದಲ್ಲಿವೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಿವೃತ್ತ ತಹಸೀಲ್ದಾರರ ನೆರವಿನಿಂದ ಹಾಗೂ ಕಾಮಗಾರಿ ಇಲಾಖೆಯ ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಮೂಲಕ ಸರ್ವೆ ಕಾರ್ಯ ನಡೆಸಲಾಗುತ್ತಿದೆ.
ಮೊದಲ ಹಂತದಲ್ಲಿ 143 ಆಸ್ತಿಗಳಲ್ಲಿ 109 ಆಸ್ತಿಗಳ (ಶೇ. 76.22) ಸರ್ವೆ ಪೂರ್ಣಗೊಂಡಿದೆ. ಉಳಿದ ಆಸ್ತಿಗಳ ಸರ್ವೆ ಶೀಘ್ರದಲ್ಲಿ ನಡೆಯಲಿದೆ.
ರಾಜ್ಯದ ಇತರ ಸಾರಿಗೆ ನಿಗಮಗಳಿಗೂ ಇದೇ ರೀತಿಯ ಆಸ್ತಿ ಡಿಜಿಟಲೀಕರಣ ಹಾಗೂ ದಾಖಲೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ.
“ಸಾರಿಗೆ ಸಂಸ್ಥೆಯ ಒಡೆತನದ ಆಸ್ತಿಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಸರಿಯಾದ ದಾಖಲೆ ನಿರ್ವಹಣೆ ಇಲ್ಲದಿದ್ದರೆ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಸ್ತಿಗಳ ಮೇಲೆ ಅತಿಕ್ರಮಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಡಿಜಿಟಲೀಕರಣ ಕಾರ್ಯ ಅತ್ಯಂತ ಅವಶ್ಯಕ” ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
Post Comment