ಬೀದರ್: ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳು ನೀಡಿರುವ ಪ್ರೀತಿ, ವಿಶ್ವಾಸ ಹಾಗೂ ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಹೇಳಿದರು.
ನಗರದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೌಹಾರ್ದತೆ ಮತ್ತು ಸಹಬಾಳ್ವೆಯ ಪ್ರತೀಕವಾಗಿರುವ ಬೀದರ್ನಲ್ಲಿ ದೊರೆತ ಆತ್ಮೀಯ ಗೌರವವನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ಈ ಸನ್ಮಾನವನ್ನು ಕೇವಲ ವೈಯಕ್ತಿಕ ಗೌರವವಾಗಿ ಪರಿಗಣಿಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ, ಹಕ್ಕುಗಳ ರಕ್ಷಣೆ, ಒಗ್ಗಟ್ಟು ಹಾಗೂ ಪ್ರಗತಿಗಾಗಿ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡುವ ಹೊಣೆಗಾರಿಕೆಯಾಗಿ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.
“ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ಎಂದಿಗೂ ಮರೆಯುವುದಿಲ್ಲ. ಸಾರ್ವಜನಿಕ ಜೀವನದುದ್ದಕ್ಕೂ ಅಲ್ಪಸಂಖ್ಯಾತ ಸಮುದಾಯದ ದನಿಯಾಗಿ, ಅವರ ಹಿತಾಸಕ್ತಿಗಳಿಗಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತೇನೆ,” ಎಂದು ಎನ್.ಎ. ಹ್ಯಾರಿಸ್ ಭರವಸೆ ನೀಡಿದರು.
ಬೀದರ್–ಕಲಬುರಗಿಯಲ್ಲಿ ಎರಡು ದಿನಗಳ ಪ್ರವಾಸ
ಎರಡು ದಿನಗಳ ಬೀದರ್ ಹಾಗೂ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಎನ್.ಎ. ಹ್ಯಾರಿಸ್ ಅವರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಬೀದರ್ಗೆ ಆಗಮಿಸಿದ ಅವರು ಗುರುನಾನಕ್ ಝೀರಾ ಸಾಹಿಬ್ ಗುರುದ್ವಾರ, ಸೆಂಟ್ ಪೌಲ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್, ಶಾಹೀನ್ ಗ್ರೂಪ್ ಶಿಕ್ಷಣ ಸಂಸ್ಥೆ ಹಾಗೂ ಜಾಮಿಯಾ ಇಸ್ಲಾಮಿಯಾ ಮದೀನತ್ ಉಲ್ ಉಲೂಮ್ಗೆ ಭೇಟಿ ನೀಡಿದರು. ವಿವಿಧ ಸಮುದಾಯಗಳ ಮುಖಂಡರು, ಉಲೇಮಾಗಳು, ಶಿಕ್ಷಣ ತಜ್ಞರು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪತ್ರಿಕಾ ಮಿತ್ರರೊಂದಿಗೆ ಸಂವಾದ ನಡೆಸಿದರು.
ಬಳಿಕ ಹೀಲಿಂಗ್ ಟ್ರೀ ಆಸ್ಪತ್ರೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಅವರು, ನೂತನವಾಗಿ ಆರಂಭಗೊಂಡ ಆರ್ವಿತಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲೂ ಭಾಗವಹಿಸಿದರು. ಹಜರತ್ ಮುಲ್ತಾನಿ ಬಾದ್ ಷಾ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಕಲಬುರಗಿಗೆ ತೆರಳಿದ ಅವರು ಶಾಸಕಿ ಖನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿರಣ್ ದೇಶಮುಖ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್, ಕೆಪಿಸಿಸಿ ಕಾರ್ಯದರ್ಶಿ ಫರಾಜ್ ಉಲ್ ಇಸ್ಲಾಂ ಸೇರಿದಂತೆ ಹಲವು ಮುಖಂಡರನ್ನು ಭೇಟಿ ಮಾಡಿ ರಾಜಕೀಯ ಹಾಗೂ ಸಾರ್ವಜನಿಕ ವಿಚಾರಗಳ ಕುರಿತು ಚರ್ಚಿಸಿದರು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ಭೇಟಿ ಮಾಡಿ ವಕ್ಫ್ ಆಸ್ತಿ ರಕ್ಷಣೆ ಹಾಗೂ ಸಮುದಾಯದ ಪರವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಇದೇ ವೇಳೆ ಐತಿಹಾಸಿಕ ಖ್ವಾಜಾ ಬಂದೇ ನವಾಝ್ ದರ್ಗಾಕ್ಕೆ ಭೇಟಿ ನೀಡಿ ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ ಅವರು, ಅಲ್ಲಿನ ಅಖಿಲ ಭಾರತ ಸಯ್ಯದ್ ಮುಹಮ್ಮದ್ ಗಿಸುದಿರಸ್ ಸಂಶೋಧನಾ ಅಕಾಡೆಮಿಗೂ ಭೇಟಿ ನೀಡಿ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.
ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಎನ್.ಎ. ಹ್ಯಾರಿಸ್ ಅವರು ಪಕ್ಷ ಸಂಘಟನೆ ಮತ್ತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.



Post Comment