×

ಶಿವಮೊಗ್ಗ ದಸರಾ ಆನೆ ಘಟನೆ: ಮುಂದಿನ ವರ್ಷದಿಂದ ಕಡ್ಡಾಯ ತಾಲೀಮುಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ

ಬೆಂಗಳೂರು: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿಕೊಂಡು ಓಡಿದ ಘಟನೆ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಂದಿನ ವರ್ಷದಿಂದ ದಸರಾ ಜಂಬೂಸವಾರಿ ಆರಂಭಕ್ಕೂ ಮುನ್ನ ಆನೆಗಳಿಗೆ ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಕಡ್ಡಾಯವಾಗಿ ತಾಲೀಮು ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಆನೆ ಬೆದರಿಕೊಂಡು ಓಡಲು ಕಾರಣವೇನು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ, ಸಾರ್ವಜನಿಕರಿಗೆ ಯಾವುದೇ ತೊಂದರೆ ಅಥವಾ ಅಪಾಯ ಉಂಟಾಗಿದೆಯೇ ಹಾಗೂ ವಾಹನಗಳಿಗೆ ಎಷ್ಟು ಹಾನಿಯಾಗಿದೆ ಎಂಬ ಕುರಿತು ಮಾಹಿತಿ ಪಡೆದುಕೊಂಡರು.

ದಸರಾ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಉತ್ಸವಗಳಲ್ಲಿ ಭಾಗವಹಿಸುವ ಆನೆಗಳಿಗೆ ಮುಂಚಿತವಾಗಿಯೇ ಸೂಕ್ತ ತರಬೇತಿ ನೀಡುವುದು ಅತ್ಯಗತ್ಯ ಎಂದು ಸಚಿವರು ಒತ್ತಿಹೇಳಿದರು.

ಜನಸಂದಣಿ, ವಾದ್ಯಗಳ ಸದ್ದು, ಮೆರವಣಿಗೆಯ ವಾತಾವರಣ ಹಾಗೂ ಇತರ ಸನ್ನಿವೇಶಗಳಿಗೆ ಆನೆಗಳು ಹೊಂದಿಕೊಳ್ಳುವಂತೆ ನಿರಂತರ ತಾಲೀಮು ನೀಡಬೇಕು. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed