ಗುಂಡ್ಲುಪೇಟೆ: ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ, ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೂ ಅಧಿಕವಾಗಿರುವುದು ಹಾಗೂ ಜಿಂಕೆ, ಕಾಡೆಮ್ಮೆ, ಕಡವೆ ಸೇರಿದಂತೆ ಬೇಟೆ ಪ್ರಾಣಿಗಳ ಸಮೃದ್ಧಿ ಅರಣ್ಯದ ಆರೋಗ್ಯಕರ ಪರಿಸರ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಚರ್ಚಿಸಲಾಯಿತು.
ಸಭೆಯಲ್ಲಿ ಬಂಡೀಪುರ ಅರಣ್ಯ ಇಲಾಖೆಯಿಂದ ಸಿದ್ಧಪಡಿಸಲಾದ ‘ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿ’ ಬಿಡುಗಡೆ ಮಾಡಲಾಯಿತು. ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ‘ಇಕೋ-ಟೂರಿಸಂ ಕ್ವಾಲಿಟಿ ಅಶ್ಯುರೆನ್ಸ್ ಮತ್ತು ವಿಸಿಟರ್ ರಿಡ್ರೆಸಲ್ ಪ್ಲಾಟ್‌ಫಾರ್ಮ್’ ಲೋಕಾರ್ಪಣೆಗೊಳಿಸಲಾಯಿತು. ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಸಚಿವರು ಸಸಿ ನೆಡುವ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದರು.

ಅರಣ್ಯ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮುಂಚೂಣಿ ಸಿಬ್ಬಂದಿಗೆ ರೇಷನ್ ಕಿಟ್‌ಗಳನ್ನು ವಿತರಿಸುವುದರ ಜೊತೆಗೆ ಕ್ಷೇತ್ರ ಕಾರ್ಯಾಚರಣೆಗಳಿಗೆ ಹೊಸ ವಾಹನಗಳನ್ನು ಹಸ್ತಾಂತರಿಸಲಾಯಿತು. ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಚಿರತೆ ಕಾರ್ಯಪಡೆಯ ಸಿಬ್ಬಂದಿಯನ್ನು ಭೇಟಿ ಮಾಡಿ, ಸಾರ್ವಜನಿಕರ ಸುರಕ್ಷತೆ ಮತ್ತು ವನ್ಯಜೀವಿ ಸಂಘರ್ಷ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಅರಣ್ಯ ಇಲಾಖೆಯಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡುವ ಕುರಿತು ಚರ್ಚೆ ನಡೆಸಲಾಯಿತು. ಥರ್ಮಲ್ ಡ್ರೋನ್‌ಗಳು, ಜಿಪಿಎಸ್ ರೇಡಿಯೋ ಕಾಲರ್‌ಗಳು, ವನ್ಯಜೀವಿ ಟೆಲಿಮೆಟ್ರಿ ಹಾಗೂ ಆಧುನಿಕ ಗಸ್ತು ಉಪಕರಣಗಳ ಕಾರ್ಯವೈಖರಿಯನ್ನು ಸಚಿವರು ವೀಕ್ಷಿಸಿದರು. ಜಿಲ್ಲಾ ಸಂಘರ್ಷ ನಿಯಂತ್ರಣ ಕೇಂದ್ರ ಮತ್ತು ಅರಣ್ಯ ಇಲಾಖೆಯ ಶ್ವಾನದಳದ ಕಾರ್ಯಚಟುವಟಿಕೆಗಳನ್ನೂ ಪರಿಶೀಲಿಸಿದರು.
ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗಳು, ಸೋಲಾರ್ ಫೆನ್ಸಿಂಗ್ ಹಾಗೂ ಆನೆ ಕಂದಕಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಂಡೀಪುರ ವ್ಯಾಪ್ತಿಯಲ್ಲಿರುವ ಅರಣ್ಯ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಹಾಗೂ ಕಳ್ಳಬೇಟೆ ತಡೆ ಶಿಬಿರಗಳ ದುರಸ್ತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಮೂಲೇಹೊಳೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ, ಹೊರರಾಜ್ಯಗಳಿಂದ ಬರುವ ವೈದ್ಯಕೀಯ ತ್ಯಾಜ್ಯಗಳ ಅಕ್ರಮ ವಿಲೇವಾರಿಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚಿಸಿದರು. ವನ್ಯಜೀವಿಗಳ ದಾಳಿಯಿಂದ ರೈತರಿಗೆ ಉಂಟಾಗುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಇದಲ್ಲದೆ, ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸಿ ಪರಿಸರ ವ್ಯವಸ್ಥೆಯನ್ನು ಅವಲೋಕಿಸಿದ ಸಚಿವರು, ಲ್ಯಾಂಟಾನಾ ಮತ್ತು ಸೆನ್ನಾ ಸ್ಪೆಕ್ಟಾಬಿಲಿಸ್‌ನಂತಹ ಆಕ್ರಮಣಕಾರಿ ಕಳೆಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವುದು ಹಾಗೂ ಕಾಳ್ಗಿಚ್ಚು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಶ್ರೀ ಗಣೇಶ್ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಶ್ರೀ ಕುಮಾರ್ ಪುಷ್ಕರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಮನೋಜ್ ರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ರವಿಶಂಕರ್ ಆರ್. ಮತ್ತು ಡಾ. ಎಂ. ಮಾಲತಿ ಪ್ರಿಯಾ ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಡು, ನಾಡು ಮತ್ತು ವನ್ಯಜೀವಿಗಳ ಸಂರಕ್ಷಣೆಯ ಜೊತೆಗೆ ರೈತರ ಹಿತಾಸಕ್ತಿ ಹಾಗೂ ಅರಣ್ಯ ಸಿಬ್ಬಂದಿಯ ಕಲ್ಯಾಣಕ್ಕೆ ಸರ್ಕಾರ ಆದ್ಯತೆ ನೀಡಲಿದೆ. ಪರಿಸರ ಸಮತೋಲನ ಕಾಪಾಡುವ ಮೂಲಕ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.



Post Comment