×

ಬಿಜೆಪಿಯ ನಾಯಕರಿಗೆ ಆರ್‌ಎಸ್‌ಎಸ್‌ನಿಂದ ವಿಶೇಷ ಸಂಸ್ಕಾರ ತರಬೇತಿ ನೀಡಲಾಗುತ್ತಿದೆಯೇ? ; ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯ

ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯ ‘ಆರ್‌ಎಸ್‌ಎಸ್ ಸಂಸ್ಕಾರ’ದ ಅಸಲಿ ಮುಖವಾಡ ಬಯಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಅವರು ಸಾರ್ವಜನಿಕವಾಗಿ ಏಕವಚನದ ಪದಗಳನ್ನು ಬಳಸಿ ಮಾತನಾಡಿ, ನಂತರ ಮುಜುಗರಗೊಂಡು ಕ್ಷಮೆ ಕೇಳುವ ನಾಟಕವಾಡಿದ್ದಾರೆ. ಅದೇ ರೀತಿ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರಿಗೆ ಸಂಸ್ಕಾರ ಕಲಿಸಲು ಆರ್‌ಎಸ್‌ಎಸ್ ಹೊಸದಾಗಿ ವಿಶೇಷ ತರಬೇತಿ ಶಿಬಿರ ಆರಂಭಿಸಿದೆಯೇ ಎಂಬ ಗಂಭೀರ ಅನುಮಾನ ಮೂಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಅಧಿಕಾರವಿಲ್ಲದೆ ಹತಾಶರಾಗಿರುವ ಬಿಜೆಪಿ ನಾಯಕರಿಗೆ ರಾಜಕೀಯವಾಗಿ ಎದುರಿಸುವ ಬೌದ್ಧಿಕ ಸಾಮರ್ಥ್ಯವಿಲ್ಲದೆ, ಬೈಗುಳ ಹಾಗೂ ಬೆದರಿಕೆಗಳೇ ರಾಜಕೀಯ ಅಸ್ತ್ರಗಳಾಗಿವೆ. ನಮ್ಮ ಕಾರ್ಯಕರ್ತರಿಗೂ ಇದೇ ರೀತಿಯ ಕಟುವಾದ ಭಾಷೆಯಲ್ಲಿ ತಿರುಗೇಟು ನೀಡಲು ಗೊತ್ತಿದೆ. ಅವರು ಮಾತನಾಡಲು ಆರಂಭಿಸಿದರೆ ಅದನ್ನು ಎದುರಿಸುವ ತಾಕತ್ತು ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇಂತಹ ಕೀಳುಮಟ್ಟದ, ವಿಕೃತ ಹಾಗೂ ಹಿಂಸಾತ್ಮಕ ರಾಜಕಾರಣವನ್ನು ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಂಯಮ ಕಳೆದುಕೊಂಡಿರುವ ನಾಯಕರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಮ್ಮ ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed