×

ಪಶ್ಚಿಮ ಘಟ್ಟಗಳ ESA ಕರಡು ಅಧಿಸೂಚನೆಗೆ ಕರ್ನಾಟಕ ಸರ್ಕಾರದ ಆಕ್ಷೇಪ

ಬೆಂಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳೀಯ ಜನರ ಹಿತಾಸಕ್ತಿ ಹಾಗೂ ವಾಸ್ತವಿಕ ಭೌಗೋಳಿಕ ಪರಿಸ್ಥಿತಿಗಳನ್ನು ಪರಿಗಣಿಸಿ ಅಧಿಸೂಚನೆಯಲ್ಲಿ ಅಗತ್ಯ ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.

ಜೂನ್ 27, 2026ರಂದು ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ESA ಅಧಿಸೂಚನೆಯಲ್ಲಿ ಕರ್ನಾಟಕದ 1,449 ಗ್ರಾಮಗಳನ್ನು ಒಳಗೊಂಡ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಆದರೆ, ಈ ವ್ಯಾಪ್ತಿಯನ್ನು ನಿಗದಿಪಡಿಸಿರುವ ವಿಧಾನದಿಂದ ಕೃಷಿ, ತೋಟಗಾರಿಕೆ, ಜನವಸತಿ ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಕರಡು ಅಧಿಸೂಚನೆಯಲ್ಲಿ ಉಪಗ್ರಹ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಪ್ರದೇಶಗಳನ್ನು ಗುರುತಿಸಲಾಗಿದ್ದು, ಸ್ಥಳೀಯ ಮಟ್ಟದ ವಾಸ್ತವಾಂಶಗಳು ಮತ್ತು ಜನರ ಅಭಿಪ್ರಾಯಗಳಿಗೆ ಸಾಕಷ್ಟು ಅವಕಾಶ ನೀಡಲಾಗಿಲ್ಲ ಎಂಬುದು ರಾಜ್ಯದ ಪ್ರಮುಖ ಆಕ್ಷೇಪವಾಗಿದೆ. ಬಗರ್ ಹುಕುಂ, ಅರಣ್ಯ ಹಕ್ಕು, ಸಾಗುವಳಿ, ಭೂ ಮಂಜೂರಾತಿ, ವಸತಿ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಂತಹ ವಿಷಯಗಳನ್ನೂ ಪರಿಗಣಿಸಬೇಕೆಂದು ರಾಜ್ಯ ಸರ್ಕಾರ ಒತ್ತಾಯಿಸಿದೆ.

ಒಂದು ಗ್ರಾಮದ ಐದನೇ ಒಂದು ಭಾಗದಷ್ಟು ಪ್ರದೇಶ ಅರಣ್ಯವಾಗಿದ್ದರೆ, ಇಡೀ ಗ್ರಾಮವನ್ನೇ ESA ವ್ಯಾಪ್ತಿಗೆ ಸೇರಿಸುವ ಮಾನದಂಡವೂ ಸಮಂಜಸವಲ್ಲ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ. ಬದಲಾಗಿ, ವಾಸ್ತವವಾಗಿ ಅಸ್ತಿತ್ವದಲ್ಲಿರುವ ಅರಣ್ಯ ಪ್ರದೇಶಗಳನ್ನು ನಿಖರವಾಗಿ ಗುರುತಿಸಿ ESA ವ್ಯಾಪ್ತಿಗೆ ತರಬೇಕು ಎಂದು ಮನವಿ ಮಾಡಿದೆ.

ಕರಡು ಅಧಿಸೂಚನೆಯಲ್ಲಿ ಈಗಾಗಲೇ ಅಧಿಸೂಚಿತ ಅರಣ್ಯ ಪ್ರದೇಶಗಳು ಹಾಗೂ ಇತರ ಸೂಕ್ತ ಅರಣ್ಯ ಪ್ರದೇಶಗಳನ್ನು ಮಾತ್ರ ESA ವ್ಯಾಪ್ತಿಗೆ ಸೇರಿಸುವಂತೆ ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಕೃಷಿ ಭೂಮಿ, ತೋಟಗಾರಿಕೆ ಮತ್ತು ವಾಣಿಜ್ಯ ಪ್ರದೇಶಗಳು, ಜನವಸತಿ ಹಾಗೂ ಸಾರ್ವಜನಿಕ ಚಟುವಟಿಕೆಗಳ ಪ್ರದೇಶಗಳನ್ನು ESA ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಲಾಗಿದೆ.

ಇದಲ್ಲದೆ, ಬಗರ್ ಹುಕುಂ, ಅರಣ್ಯ ಹಕ್ಕು, ಸಾಗುವಳಿ, ಭೂ ಮಂಜೂರಾತಿ, ವಸತಿ ಹಾಗೂ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಹಕ್ಕುಗಳನ್ನು ಪರಿಗಣಿಸಬೇಕು. ಸ್ಥಳೀಯವಾಗಿ ಅರಣ್ಯ, ಜನವಸತಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಸ್ಥಳ ಪರಿಶೀಲನೆ ಹಾಗೂ ಭೌಗೋಳಿಕವಾಗಿ ನಿಖರವಾದ ನಕ್ಷೆಗಳನ್ನು ಬಳಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ESA ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಹಾಗೂ ಸ್ಥಳೀಯ ಸಮುದಾಯಗಳಿಗೆ ತಮ್ಮ ಅಭಿಪ್ರಾಯ ಮತ್ತು ಆಕ್ಷೇಪಗಳನ್ನು ದಾಖಲಿಸಲು ಸೂಕ್ತ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಅರಣ್ಯ, ಕಂದಾಯ, ಪಂಚಾಯತ್ ರಾಜ್, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅರಣ್ಯ ಮತ್ತು ಪರಿಸರ ಕ್ಷೇತ್ರದ ತಜ್ಞರು, ರೈತ ಸಮುದಾಯದ ಪ್ರತಿನಿಧಿಗಳು ಹಾಗೂ ತಜ್ಞ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಕೇಂದ್ರದ ಕರಡು ಅಧಿಸೂಚನೆಯನ್ನು ಪರಿಶೀಲಿಸಿ ಸೂಕ್ತ ತಿದ್ದುಪಡಿಗಳ ಕುರಿತು ಶಿಫಾರಸು ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಕರಡು ಅಧಿಸೂಚನೆ ಕುರಿತು ಸಮಗ್ರ ಪರಿಶೀಲನೆ ಮತ್ತು ರಾಜ್ಯದ ನಿಲುವನ್ನು ಅಂತಿಮಗೊಳಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಕೋರಿದೆ. ಈ ಅವಧಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ESA ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಹಾಗೂ ರಾಜ್ಯ ಸರ್ಕಾರದೊಂದಿಗೆ ಮತ್ತಷ್ಟು ಸಮಾಲೋಚನೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಜನರ ಹಿತಾಸಕ್ತಿ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ವಾಸ್ತವಾಂಶಗಳನ್ನು ಸಮತೋಲನಗೊಳಿಸುವ ರೀತಿಯಲ್ಲಿ ESA ವ್ಯಾಪ್ತಿಯನ್ನು ಅಂತಿಮಗೊಳಿಸುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಒತ್ತಿ ಹೇಳಿದೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed