₹38 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ
ಬೆಂಗಳೂರು, ನವೆಂಬರ್ 09: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಅನುಕೂಲತೆ, ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ₹38 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ನೂತನ ಸೌಲಭ್ಯಗಳನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ ಸಚಿವರು, ಪ್ರವಾಸಿಗರ ಅನುಕೂಲಕ್ಕಾಗಿ ನೂತನ ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆ ನೀಡಿದರು. ಅಲ್ಲದೆ, ನೂತನವಾಗಿ ನಿರ್ಮಿಸಿರುವ ‘ಅಡವಿ’ ಆಡಳಿತ ಕಚೇರಿ ಕಟ್ಟಡ, ಲೈವ್ ಫೀಡ್ ಘಟಕ, ಕೇಂದ್ರೀಯ ನರ್ಸರಿ, ಕ್ಯಾರಂಟೈನ್ ಬ್ಲಾಕ್ ಹಾಗೂ ನವೀಕೃತ ಮುಖ್ಯ ಪ್ರವೇಶ ದ್ವಾರವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಹೊಸದಾಗಿ ಆರಂಭಿಸಲಾದ ಝೂ ಶಾಪ್, ಸುವರ್ಣಮುಖಿ ಕೆಫೆ ಮತ್ತು ಅರಣ್ಯ ಸಿಬ್ಬಂದಿಗಳ ವಸತಿಗೃಹಗಳಿಗೂ ಚಾಲನೆ ನೀಡಿದರು. ತೋಳಗಳು, ಚೀತಾ, ಎಮು, ರಿಯಾ ಹಾಗೂ ಫೆಸೆಂಟ್ ಪಕ್ಷಿಗಳಿಗಾಗಿ ನಿರ್ಮಿಸಿರುವ ನೂತನ ಆವರಣಗಳನ್ನು ಉದ್ಘಾಟಿಸಿದರು.
ಹಿಪ್ಪೋಪೊಟಮಸ್ ಚಿಕಿತ್ಸೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಮೃತಪಟ್ಟ ಪಶುವೈದ್ಯಾಧಿಕಾರಿ ಡಾ. ಸಮೀಕ್ಷ ಅವರ ಸ್ಮರಣಾರ್ಥ ಹಿಪ್ಪೋಪೊಟಮಸ್ ಬ್ಲಾಕ್‌ಗೆ ಹಾಗೂ ಮರಿ ಹಿಪ್ಪೋಪೊಟಮಸ್‌ಗೆ ‘ಸಮೀಕ್ಷ’ ಎಂದು ನಾಮಕರಣ ಮಾಡುವಂತೆ ಸಚಿವರು ಸೂಚನೆ ನೀಡಿದರು.
ನಂತರ ಸಫಾರಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಆನೆಗಳ ಆರೋಗ್ಯ, ಆರೈಕೆ, ಕಲ್ಯಾಣ ಮತ್ತು ನಿರ್ವಹಣೆಗಾಗಿ ಮೀಸಲಾಗಿರುವ ‘ಸುವರ್ಣ ಆನೆ ಆರೈಕೆ ಕೇಂದ್ರ’ದ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿದರು. ಸಫಾರಿ ವೀಕ್ಷಣೆಯ ಮೂಲಕ ಉದ್ಯಾನವನದಲ್ಲಿ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣೆ ಹಾಗೂ ನಿರ್ವಹಣಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ರವಿ ಬಿ.ಪಿ. (ಭಾ.ಅ.ಸೇ.), ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.



Post Comment