×

ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆ ಅಧ್ಯಕ್ಷರಾಗಿ ಎನ್.ಎ. ಹ್ಯಾರಿಸ್ ಆಯ್ಕೆ

ಬೆಂಗಳೂರು, ಸೆ.24: ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆಯ ಅಧ್ಯಕ್ಷರಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ನಡೆದ ವೇದಿಕೆಯ ಸಭೆಯಲ್ಲಿ ಹ್ಯಾರಿಸ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ವೇಳೆ ಶಾಸಕ ಯಾಸಿರ್ ಪಠಾಣ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಬಲ್ಕಿಸ್ ಬಾನು ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಸಮುದಾಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಹಾಗೂ ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರುವುದು ವೇದಿಕೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ರಿಜ್ವಾನ್ ಅರ್ಷದ್, ರಹೀಮ್ ಖಾನ್, ಇಕ್ಬಾಲ್ ಹುಸೇನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಎ. ಹ್ಯಾರಿಸ್ ಅವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ ಎನ್.ಎ. ಹ್ಯಾರಿಸ್, ತಮ್ಮ ಆಯ್ಕೆಯನ್ನು ಗೌರವದ ಜೊತೆಗೆ ಮಹತ್ವದ ಜವಾಬ್ದಾರಿಯೆಂದು ಪರಿಗಣಿಸುವುದಾಗಿ ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳು, ಹಕ್ಕುಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಸರ್ಕಾರದ ಗಮನಕ್ಕೆ ಪರಿಣಾಮಕಾರಿಯಾಗಿ ತರುವ ಪ್ರಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ.

ಎಲ್ಲರನ್ನು ಒಳಗೊಂಡ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ವೇದಿಕೆಯ ಮೂಲಕ ಧ್ವನಿಯಾಗುವುದಾಗಿ ತಿಳಿಸಿರುವ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಶಾಸಕರು ಮತ್ತು ಹಿರಿಯ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed