×

ಗುಲಾಬಿ ಮೆಟ್ರೋ ಮಾರ್ಗದ ಮೂಲ ಯೋಜನೆಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಅನುಮೋದನೆ: ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದ ಬಹುನಿರೀಕ್ಷಿತ ಗುಲಾಬಿ ಮಾರ್ಗದ (Pink Line) ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಮೊದಲ ಕಾರ್ಯಾಚರಣಾ ವಿಭಾಗವು ನವೆಂಬರ್ 13ರಂದು ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಮೂಲ ಅನುಮೋದನೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ದೊರೆತಿತ್ತು ಎಂದು ಅವರು ಸ್ಮರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 2013-14ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ತಾವು ಸಾರಿಗೆ ಸಚಿವ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, 2014ರ ಜನವರಿ 30ರಂದು ಯುಪಿಎ ಸರ್ಕಾರದ ಅವಧಿಯಲ್ಲಿಯೇ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಅನುಮೋದನೆ ನೀಡಿತ್ತು ಎಂದು ತಿಳಿಸಿದ್ದಾರೆ.

ಗೊಟ್ಟಿಗೆರೆ–ನಾಗವಾರ ಮಾರ್ಗವು ಎರಡನೇ ಹಂತದ ಯೋಜನೆಯ ಭಾಗವಾಗಿದ್ದು, ಅದೇ ಮಾರ್ಗವು ಇಂದು ಗುಲಾಬಿ ಮಾರ್ಗವಾಗಿ ಅಭಿವೃದ್ಧಿಗೊಂಡಿದೆ. ಹೀಗಾಗಿ, ಪ್ರಸ್ತುತ ಉದ್ಘಾಟನೆಯಾಗುತ್ತಿರುವ ಗುಲಾಬಿ ಮಾರ್ಗದ ಮೂಲ ಯೋಜನೆಗೆ ಕೇಂದ್ರ ಮಟ್ಟದ ಅನುಮೋದನೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ದೊರೆತಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

₹8,730 ಕೋಟಿಯಿಂದ ₹17,346 ಕೋಟಿಗೆ ಏರಿದ ಯೋಜನಾ ವೆಚ್ಚ

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗದ ಮೂಲ ಅಂದಾಜು ವೆಚ್ಚ ₹8,730 ಕೋಟಿಯಾಗಿತ್ತು. ನಂತರದ ಪರಿಷ್ಕೃತ ಅಂದಾಜಿನ ಪ್ರಕಾರ ಯೋಜನಾ ವೆಚ್ಚ ₹17,346 ಕೋಟಿಗೆ ಏರಿಕೆಯಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸುಮಾರು ₹12,000 ಕೋಟಿ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

ಇನ್ನು ನಮ್ಮ ಮೆಟ್ರೋದ ಮೊದಲ, ಎರಡನೇ, 2A, 2B ಹಾಗೂ ಮೂರನೇ ಹಂತಗಳ ಒಟ್ಟು ಯೋಜನಾ ವೆಚ್ಚ ₹77,891 ಕೋಟಿಯಾಗಿದ್ದು, ಇದರಲ್ಲಿ ಕರ್ನಾಟಕ ಸರ್ಕಾರದ ಕೊಡುಗೆ ₹65,291 ಕೋಟಿ (ಶೇ. 83.8) ಹಾಗೂ ಕೇಂದ್ರ ಸರ್ಕಾರದ ಕೊಡುಗೆ ₹12,600 ಕೋಟಿ (ಶೇ. 16.2) ಎಂದು ವಿವರಿಸಿದ್ದಾರೆ.

ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಯುಪಿಎ ಸರ್ಕಾರ ಹಾಕಿಕೊಟ್ಟ ಅಡಿಪಾಯ, ಕರ್ನಾಟಕದ ವಿವಿಧ ಸರ್ಕಾರಗಳ ನಿರಂತರ ಪ್ರಯತ್ನ ಹಾಗೂ ನಂತರದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರವನ್ನು ಮರೆಯಬಾರದು. ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ, ಕರ್ನಾಟಕ ಸರ್ಕಾರದ ಆರ್ಥಿಕ ಬದ್ಧತೆ ಮತ್ತು ಬೆಂಗಳೂರಿನ ಜನರ ಕನಸಿನ ಪ್ರತೀಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 13ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದರು, ಸಚಿವರು ಮತ್ತು ಶಾಸಕರ ಉಪಸ್ಥಿತಿಯಲ್ಲಿ ಗುಲಾಬಿ ಮಾರ್ಗದ ಮೊದಲ ಕಾರ್ಯಾಚರಣಾ ವಿಭಾಗ ಉದ್ಘಾಟನೆಗೊಳ್ಳಲಿದೆ.

ಈ ಯೋಜನೆಯ ಉದ್ಘಾಟನೆಯು ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ನೀಡಲಿದ್ದು, ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ಕೊಡುಗೆಗೆ ಸೂಕ್ತ ಗೌರವ ಹಾಗೂ ಮನ್ನಣೆ ದೊರೆಯಬೇಕು ಎಂದು ರಾಮಲಿಂಗ ರೆಡ್ಡಿ ಆಶಿಸಿದ್ದಾರೆ.

“ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ. ಕರ್ನಾಟಕ ಬೆಳೆದರೆ ದೇಶ ಬೆಳೆಯುತ್ತದೆ” ಎಂಬ ಆಶಯದೊಂದಿಗೆ ಗುಲಾಬಿ ಮಾರ್ಗದ ಉದ್ಘಾಟನೆಯು ಬೆಂಗಳೂರಿನ ಅಭಿವೃದ್ಧಿಯ ಪಯಣದಲ್ಲಿ ಮತ್ತೊಂದು ಮೈಲಿಗಲ್ಲಾಗಲಿ ಎಂದು ಅವರು ಹಾರೈಸಿದ್ದಾರೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Previous post

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿ ಡಾ. ರಾಜಾರಾಮ್ ಕೆ.ಬಿ. ನೇಮಕ

Next post

ಸ್ವಚ್ಛ ವಾಯು ಸರ್ವೇಕ್ಷಣ್ 2026, ಘನತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಸಾಧನೆ: ಸ್ವಚ್ಛ ವಾಯು ಸರ್ವೇಕ್ಷಣ್‌ನಲ್ಲಿ ಕೋರಮಂಗಲ ವಾರ್ಡ್‌ಗೆ ರಾಷ್ಟ್ರೀಯ ಪ್ರಶಸ್ತಿ

Post Comment

You May Have Missed