×

RSS ಇತಿಹಾಸ ಪ್ರಸ್ತಾಪಿಸಿ ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದ ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು: ರಾಷ್ಟ್ರಧ್ವಜದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವ ರಾಮಲಿಂಗ ರೆಡ್ಡಿ ಅವರು, “ನಮಗೆ ದೇಶಭಕ್ತಿಯ ಪಾಠ ಹೇಳುವ ಅಗತ್ಯವಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.

ಸ್ವಾತಂತ್ರ್ಯ ಬಂದ 1947ರಿಂದಲೂ ದೇಶದ ಕೋಟ್ಯಂತರ ಜನರು ಸ್ವಯಂಪ್ರೇರಣೆಯಿಂದ ಹಾಗೂ ಗೌರವದಿಂದ ರಾಷ್ಟ್ರಧ್ವಜವನ್ನು ಹಾರಿಸುತ್ತಾ ಬಂದಿದ್ದಾರೆ. ದೇಶಪ್ರೇಮದ ವಿಚಾರದಲ್ಲಿ ಪ್ರಧಾನಿ ಅಥವಾ ಸರ್ಕಾರದ ಪ್ರಚಾರದಿಂದ ಯಾರೂ ಪಾಠ ಕಲಿಯಬೇಕಿಲ್ಲ ಎಂದು ಅವರು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ 52 ವರ್ಷಗಳ ಕಾಲ ರಾಷ್ಟ್ರಧ್ವಜ ಹಾರಿಸಿರಲಿಲ್ಲ ಎಂದು ಉಲ್ಲೇಖಿಸಿರುವ ರಾಮಲಿಂಗ ರೆಡ್ಡಿ ಅವರು, 2002ರ ಜನವರಿ 26ರಂದು ಮೊದಲ ಬಾರಿಗೆ ಅಲ್ಲಿ ಧ್ವಜಾರೋಹಣ ಮಾಡಲಾಯಿತು ಎಂದು ಆರೋಪಿಸಿದ್ದಾರೆ. ಇಂತಹ ಹಿನ್ನೆಲೆ ಹೊಂದಿರುವವರು ಇಂದು ರಾಷ್ಟ್ರಾಭಿಮಾನದ ಬಗ್ಗೆ ಪ್ರಮಾಣಪತ್ರ ನೀಡಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.

ದೇಶಭಕ್ತಿ ಎಂದರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುವುದಲ್ಲ. ಸಂವಿಧಾನವನ್ನು ರಕ್ಷಿಸುವುದು, ಪ್ರಜಾಪ್ರಭುತ್ವವನ್ನು ಉಳಿಸುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಿಜವಾದ ದೇಶಭಕ್ತಿ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಯುವಕರಿಗೆ ಉದ್ಯೋಗದ ಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಬಡವರು ಮತ್ತು ಮಧ್ಯಮ ವರ್ಗದವರ ಸಂಕಷ್ಟದಂತಹ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಕೇವಲ ರಾಜಕೀಯ ಲಾಭ ಮತ್ತು ಪ್ರಚಾರಕ್ಕಾಗಿ ತ್ರಿವರ್ಣ ಧ್ವಜವನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಚಿವ ರಾಮಲಿಂಗ ರೆಡ್ಡಿ ಆಗ್ರಹಿಸಿದ್ದಾರೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed