ಬೆಂಗಳೂರು, ಅ.6: ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳನ್ನು, ವಿಶೇಷವಾಗಿ ಪರಿಸರ ಪ್ರವಾಸೋದ್ಯಮ ವಲಯಗಳನ್ನು ತಕ್ಷಣದಿಂದಲೇ ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸುವಂತೆ ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಅಕ್ಟೋಬರ್ 5ರಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 8ನೇ ಸಭೆ ಹಾಗೂ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಪ್ರತಿಷ್ಠಾನಗಳ ಆಡಳಿತ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಪರಿಸರ ಸೂಕ್ಷ್ಮ ವಲಯಗಳಲ್ಲಿ ಅಕ್ರಮವಾಗಿ ಸ್ಥಾಪಿಸಿರುವ ರೆಸಾರ್ಟ್ಗಳು, ಹೋಂಸ್ಟೇಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು. ಪರಿಸರ ಸೂಕ್ಷ್ಮ ವಲಯಗಳಲ್ಲಿ ಅಡಚಣೆಗಳನ್ನು ಕಡಿಮೆ ಮಾಡಿ, ಅಗತ್ಯವಿರುವ ಪ್ರದೇಶಗಳನ್ನು ಮೌನ ವಲಯಗಳಾಗಿ ಘೋಷಿಸುವ ಕುರಿತು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಇದೇ ವೇಳೆ, ಪರಿಸರ ಸೂಕ್ಷ್ಮ ವಲಯಗಳಿಗೆ ಸಂಬಂಧಿಸಿದ ಝೋನಲ್ ಮಾಸ್ಟರ್ ಪ್ಲಾನ್ಗಳ ತಯಾರಿಕೆಯನ್ನು ತಕ್ಷಣ ಆರಂಭಿಸಿ, ಈ ಪ್ರದೇಶಗಳಲ್ಲಿ ಸಾರ್ವಜನಿಕರು ಪಾಲಿಸಬೇಕಾದ ‘Do’s and Don’ts’ ಕುರಿತು ವ್ಯಾಪಕ ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು.
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿನ ಖಾಸಗಿ ಜಮೀನಿನಲ್ಲಿ ಪರಿಸರ ಪ್ರವಾಸೋದ್ಯಮ ರೆಸಾರ್ಟ್ ಸ್ಥಾಪಿಸುವ ಪ್ರಸ್ತಾವನೆಯನ್ನು ಚರ್ಚೆಯ ನಂತರ ಮುಂದೂಡಲಾಯಿತು. ಗದಗದ ಕಪ್ಪತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ಕಲ್ಲುಗಳ ಗಣಿಗಾರಿಕೆ ನಡೆಸುವ ಪ್ರಸ್ತಾವನೆಗೆ ಶಿಫಾರಸು ನೀಡದಿರಲು ಸಭೆ ನಿರ್ಧರಿಸಿತು.
ವಿದ್ಯುದೀಕರಣ, BSNL ಸ್ಯಾಚುರೇಶನ್ ಟವರ್ಗಳು, OFC ಕೇಬಲ್ಗಳು ಹಾಗೂ ಸಣ್ಣ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲು ಅನುಮೋದಿಸಲಾಯಿತು.
ಶೆಟ್ಟಿಹಳ್ಳಿ ವನ್ಯಜೀವಿಧಾಮದ ಗಡಿ ಮರುವಿಂಗಡಣೆ ಪ್ರಸ್ತಾವನೆಯನ್ನೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಸಲ್ಲಿಸಲು ನಿರ್ಧರಿಸಲಾಯಿತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ಮರು-ಅಧಿಸೂಚನೆ ವಿಚಾರದಲ್ಲಿಯೂ ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿಪ್ರಾಯ ಸಲ್ಲಿಸಲು ಸಭೆ ನಿರ್ಧರಿಸಿತು.
ವನ್ಯಜೀವಿ ರಕ್ಷಣೆಗೆ ಹೆಚ್ಚಿನ ಒತ್ತು
ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳ ಪ್ರತಿಷ್ಠಾನಗಳ 18ನೇ ವಾರ್ಷಿಕ ಆಡಳಿತ ಮಂಡಳಿ ಸಭೆ ಹಾಗೂ ಕೊಡಗು ಮಾನವ-ವನ್ಯಜೀವಿ ಸಂಘರ್ಷ ನಿವಾರಣಾ ಪ್ರತಿಷ್ಠಾನದ 9ನೇ ವಾರ್ಷಿಕ ಸಭೆಯಲ್ಲೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಪ್ರತಿಷ್ಠಾನದ ಆದಾಯವನ್ನು ಹುಲಿ ಮೀಸಲು ಪ್ರದೇಶಗಳ ಅಂಚಿನ ಗ್ರಾಮಗಳ ಪರಿಸರ ಅಭಿವೃದ್ಧಿ, ಬುಡಕಟ್ಟು ಹಾಡಿಗಳ ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮಗಳು ಹಾಗೂ ಜೀವನೋಪಾಯ ಚಟುವಟಿಕೆಗಳಿಗೆ ಆದ್ಯತೆಯಾಗಿ ಬಳಸುವಂತೆ ಸೂಚಿಸಲಾಯಿತು. ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಕುರಿತೂ ಗಮನಹರಿಸಲಾಯಿತು.
ಅರಣ್ಯ ಸಿಬ್ಬಂದಿಯ ವಸತಿಗೃಹಗಳ ದುರಸ್ತಿ, ಕಳ್ಳಬೇಟೆ ತಡೆ ಶಿಬಿರಗಳ ಸುಧಾರಣೆ, ಆರೋಗ್ಯ ವಿಮೆ ಮತ್ತು ಮಕ್ಕಳ ಶಿಕ್ಷಣದಂತಹ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಸಚಿವರು ಸೂಚಿಸಿದರು.
ಇದಲ್ಲದೆ, ಬಾಡಿ ಕ್ಯಾಮೆರಾಗಳು, ಕ್ಯಾಮೆರಾ ಟ್ರ್ಯಾಪ್ಗಳು, ಸ್ಮಾರ್ಟ್ ಸ್ಟಿಕ್ಗಳು, ರಕ್ಷಣಾತ್ಮಕ ಗೇರ್ಗಳು, ಅಗ್ನಿಶಾಮಕ ಉಪಕರಣಗಳು ಹಾಗೂ ಸಿಬ್ಬಂದಿಯ ಸುರಕ್ಷತಾ ಉಡುಪುಗಳನ್ನು ಪ್ರತಿಷ್ಠಾನ ನಿಧಿಯಿಂದ ಖರೀದಿಸಿ ವನ್ಯಜೀವಿ ಸಂರಕ್ಷಣಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವಂತೆ ನಿರ್ದೇಶಿಸಲಾಯಿತು.
ಖಾಲಿ ಪಶುವೈದ್ಯರ ಹುದ್ದೆ ಭರ್ತಿಗೆ ಸೂಚನೆ
ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದಲ್ಲಿ ಖಾಲಿ ಇರುವ ಪಶುವೈದ್ಯರ ಹುದ್ದೆಗಳನ್ನು ಅರ್ಹ ಪಶುವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಆಕರ್ಷಕ ವೇತನ ಪ್ಯಾಕೇಜ್ನೊಂದಿಗೆ ನೇಮಕ ಮಾಡುವ ಮೂಲಕ ಭರ್ತಿ ಮಾಡುವಂತೆ ಸಚಿವರು ಸೂಚಿಸಿದರು.
ಮಾನವ-ವನ್ಯಜೀವಿ ಸಂಘರ್ಷ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಸಂಖ್ಯೆಯ ವನ್ಯಜೀವಿ ಪಶುವೈದ್ಯರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.



Post Comment