ಮೃತ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರದ ಚೆಕ್ ವಿತರಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ಇಂದು ಅಪಘಾತ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ ಸಿಬ್ಬಂದಿಗಳ ಕುಟುಂಬಗಳಿಗೆ ಪರಿಹಾರ ವಿತರಣೆ ಜೊತೆಗೆ ವಾಣಿಜ್ಯ ಮಳಿಗೆಗಳ ನಿರ್ವಹಣೆ ತಂತ್ರಾಂಶ — ಇ–ವಾಣಿಜ್ಯ (Commercial Management Software) ಸಾಫ್ಟ್ ಲಾಂಚ್ ನೆರವೇರಿತು.

ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಉಪಾಧ್ಯಕ್ಷರಾದ ಮೊಹಮ್ಮದ್ ರಿಜ್ವಾನ್ ನವಾಬ್, ಕರಾರಸಾ ನಿಗಮ ರವರು ಕಾರ್ಯಕ್ರಮವನ್ನು ನೆರವೇರಿಸಿದರು.
ರೂ.1 ಕೋಟಿ ಪರಿಹಾರ – ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆ:
ಸಿಬ್ಬಂದಿಗಳ ಅವಲಂಬಿತರ ಆರ್ಥಿಕ ಭದ್ರತೆಯಿಗಾಗಿ ಜಾರಿಗೆ ತಂದಿರುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆ ಅಡಿ, ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಸಂಭವಿಸಿದ ಅಪಘಾತ ಮತ್ತು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಗಳ ಕುಟುಂಬಗಳಿಗೆ ತಲಾ ರೂ.1 ಕೋಟಿ ಚೆಕ್‌ಗಳನ್ನು ನೀಡಲಾಯಿತು.
ಇದುವರೆಗೆ ಒಟ್ಟಾರೆ 42 ಸಿಬ್ಬಂದಿಗಳ ಕುಟುಂಬಗಳಿಗೆ ರೂ.42 ಕೋಟಿ ಪರಿಹಾರ ವಿತರಿಸಲಾಗಿದೆ.
ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ – ರೂ.10 ಲಕ್ಷದಿಂದ ರೂ.14 ಲಕ್ಷಕ್ಕೆ ವೃದ್ಧಿ
ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬಗಳಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು
01.11.2023ರಿಂದ ರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಮತ್ತು
01.09.2025ರಿಂದ ರೂ.10 ಲಕ್ಷದಿಂದ ರೂ.14 ಲಕ್ಷಕ್ಕೆ ಹೆಚ್ಚಿಸಲಾಗಿದೆ.
31 ಸಿಬ್ಬಂದಿಗಳ ಕುಟುಂಬಗಳಿಗೆ ತಲಾ ರೂ.10 ಲಕ್ಷದಂತೆ ಒಟ್ಟು ರೂ.3.10 ಕೋಟಿ
ಇಬ್ಬರು ಅವಲಂಬಿತರಿಗೆ ರೂ.14 ಲಕ್ಷದಂತೆ ರೂ.28 ಲಕ್ಷ
ಪರಿಹಾರ ವಿತರಿಸಲಾಯಿತು.
ಇದುವರೆಗೆ 181 + 2 ಕುಟುಂಬಗಳಿಗೆ ರೂ.18.38 ಕೋಟಿ ಪರಿಹಾರ ನೀಡಲಾಗಿದೆ.

ಸಚಿವರಾದ ರಾಮಲಿಂಗಾರೆಡ್ಡಿ ಮಾತನಾಡಿ, “ಮಾನವ ಜೀವ ಅಮೂಲ್ಯ. ಹಣವು ಅವರನ್ನು ಮರಳಿಸಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಗಳು ಭವಿಷ್ಯದಲ್ಲಿ ಆರ್ಥಿಕವಾಗಿ ಭದ್ರವಾಗಿರಬೇಕು ಎನ್ನುವ ಉದ್ದೇಶದಿಂದಲೇ ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ” ಎಂದು ಹೇಳಿದರು. ಪರಿಹಾರ ಮೊತ್ತವನ್ನು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಮುಂತಾದ ಅಗತ್ಯ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು. “ಹಣವಿದ್ದರೆ ಅನೇಕರಿಗೆ ನೆಂಟರಾಗುತ್ತಾರೆ; ಪರಿಹಾರ ಮೊತ್ತವನ್ನು ಯಾರಿಗೂ ನೀಡಬೇಡಿ” ಎಂದು ಕಿವಿಮಾತು ಹೇಳಿದರು.
ಯೋಜನೆ ಯಶಸ್ವಿಯಾಗಲು ಎಸ್.ಬಿ.ಐ ಬ್ಯಾಂಕಿನ ಸಹಕಾರ ಮಹತ್ವದ್ದೆಂದು ಅವರು ಧನ್ಯವಾದ ಸಲ್ಲಿಸಿದರು.
ಇ–ವಾಣಿಜ್ಯ ತಂತ್ರಾಂಶ (Commercial Management Software) ಸಾಫ್ಟ್ ಲಾಂಚ್:
ಕರಾಸಾ ನಿಗಮದ ವ್ಯಾಪ್ತಿಯಲ್ಲಿರುವ ಬಸ್ ನಿಲ್ದಾಣಗಳಲ್ಲಿ ಒಟ್ಟು 1847 ವಾಣಿಜ್ಯ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.
ಹಿಂದಿನ ಮ್ಯಾನ್ಯುಯಲ್ ಪದ್ಧತಿಯಲ್ಲಿ ಪರವಾನಗಿ ಶುಲ್ಕ, ಜಿ.ಎಸ್.ಟಿ, ತಡಪಾವತಿ ದಂಡ, ಇನ್ವಾಯ್ಸ್ ತಯಾರಿಕೆ ಮುಂತಾದ ಪ್ರಕ್ರಿಯೆಗಳು ಸಮಯ ಹೆಚ್ಚು ತೆಗೆದುಕೊಳ್ಳುತ್ತಿದ್ದು, ತಪ್ಪು ಸಾಧ್ಯತೆ ಹೆಚ್ಚಿತ್ತು.

ಈ ಸಮಸ್ಯೆ ನಿವಾರಣೆಗೆ ನಿಗಮದ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ವಾಣಿಜ್ಯ ಮಳಿಗೆಗಳ ನಿರ್ವಹಣೆ ತಂತ್ರಾಂಶ – ಇ–ವಾಣಿಜ್ಯ ಅಭಿವೃದ್ಧಿಪಡಿಸಲಾಗಿದೆ.
ಇದು ಲೆಕ್ಕಾಚಾರದಲ್ಲಿ ಏಕರೂಪತೆ, ಪಾರದರ್ಶಕತೆ ಹಾಗೂ ದಕ್ಷತೆ ಹೆಚ್ಚಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕ್ರಮ ಪಾಷ ಭಾಆಸೇ – ವ್ಯವಸ್ಥಾಪಕ ನಿರ್ದೇಶಕರು, ಡಾ. ನಂದಿನಿದೇವಿ ಕೆ. ಭಾಆಸೇ – ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತಿ), ಇಬ್ರಾಹಿಂ ಮೈಗೂರ ಭಾಆಸೇ – ನಿರ್ದೇಶಕರು (ಮಾಹಿತಿ ತಂತ್ರಜ್ಞಾನ), ಎಸ್.ಬಿ.ಐ ಅಧಿಕಾರಿಗಳಾದ ಸಿ.ವಿ. ರಘುರಾಮ್ (ಡಿವಿಜನಲ್ ಜನರಲ್ ಮ್ಯಾನೇಜರ್) ಹಾಗೂ ವಿಜಯ್ ಕೆ.ಟಿ. (ಸಹಾಯಕ ಜನರಲ್ ಮ್ಯಾನೇಜರ್), ಕರಾಸಾ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.



Post Comment