ಸಮಸ್ಯೆಗೆ ಪರಿಹಾರ; ರಾಮಲಿಂಗಾ ರೆಡ್ಡಿಯ ಕ್ರಮಕ್ಕೆ ಎಲ್ಲೆಡೆ ಪ್ರಶಂಸೆ
ಹುಬ್ಬಳ್ಳಿ:
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಇಂದು ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ನೀಡಿದೆ. ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ದೊಡ್ಡ ಸಂತಸದ ಸುದ್ದಿ.
ಕೋವಿಡ್-19 ಹಿನ್ನೆಲೆಯಲ್ಲಿ 2020ರಲ್ಲಿ ಹೊರಡಿಸಿದ್ದ ಸರ್ಕಾರದ ಆದೇಶದ ಮೇರೆಗೆ ನೇರ ನೇಮಕಾತಿ ಹುದ್ದೆಗಳ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ನಂತರ 2024ರ ಮಾರ್ಚ್ 1ರಂದು ಚಾಲನಾ ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡಲಾಗಿದ್ದರೂ, 2019ರ ಅಧಿಸೂಚನೆಯಲ್ಲಿ ಕೇವಲ ಚಾಲಕರ ಹುದ್ದೆಗಳೇ ಉಲ್ಲೇಖವಾಗಿದ್ದವು. ವಾಯವ್ಯ ಸಾರಿಗೆ ಸಂಸ್ಥೆಯ ಮನವಿಯನ್ನು ಪರಿಗಣಿಸಿ, ನಿರ್ವಾಹಕರ ಕೊರತೆ ಹಾಗೂ ಮುಂದಿನ ದಿನಗಳಲ್ಲಿ ವಿದ್ಯುತ್ ಬಸ್ಸುಗಳ ಸೇರ್ಪಡೆ ಗಮನಿಸಿ 1000 ನಿರ್ವಾಹಕ ಹುದ್ದೆಗಳ ಭರ್ತಿಗೆ ಮಾರ್ಪಡಣೆ ಮಾಡಲಾಗಿತ್ತು.
ಈ ಬದಲಾವಣೆಯಿಂದ 2019ರ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅನೇಕ ಅಭ್ಯರ್ಥಿಗಳು ವಯೋಮಿತಿ ಮೀರಿಬಿಟ್ಟಿದ್ದರು. ತಮ್ಮ ಮೇಲೆ ನ್ಯಾಯವಾಗಬೇಕೆಂಬ ಬೇಡಿಕೆಯನ್ನು ಅಭ್ಯರ್ಥಿಗಳು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ನೇರವಾಗಿ ಮನವಿ ಮಾಡಿದ್ದರು. ಈ ಮನವಿಗೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಅಧ್ಯಕರು ರಾಜು ಕಾಗೆ ಅವರೂ ಬೆಂಬಲ ಸೂಚಿಸಿದ್ದರು.
ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳನ್ನು ಭೇಟಿ ಮಾಡಿದ ಸಾರಿಗೆ ಸಚಿವರು, ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಸಕಾರಾತ್ಮಕವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಇಂದು ಆ ಭರವಸೆ ನಿಜವಾಗಿ, 2019ರ ಮೂಲ ಅಧಿಸೂಚನೆಗೆ ಅನುಗುಣವಾಗಿ 1000 ಚಾಲನ ಸಿಬ್ಬಂದಿಗಳ ನೇಮಕಾತಿಗೆ ಅಂತಿಮ ಹಸಿರು ನಿಶಾನೆ ದೊರಕಿದೆ.
ಅಭ್ಯರ್ಥಿಗಳ ನ್ಯಾಯಬದ್ಧ ಬೇಡಿಕೆಗೆ ಸ್ಪಂದಿಸಿದ ಸಚಿವರ ಮಾನವೀಯತೆ ಹಾಗೂ ಬದ್ಧತೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.



Post Comment