ಕೆಎಸ್‌ಆರ್‌ಟಿಸಿ ಯ ಯಶಸ್ಸಿನ ಸೂತ್ರಗಳ ಅಧ್ಯಯನ
ಬೆಂಗಳೂರು: ದಿನಾಂಕ 27.11.2025 ರಂದು ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿತೇಂದ್ರ ಯಾದವ್, ಭಾಆಸೇ., ಹಾಗೂ ಅಧಿಕಾರಿಗಳ ತಂಡವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಅವರು ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ಭಾಆಸೇ., ರವರನ್ನು ಭೇಟಿ ಮಾಡಿ ನಿಗಮದ ವಿವಿಧ ಕಾರ್ಯಪದ್ದತಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ಭೇಟಿ ಸಂದರ್ಭ ಕೆಎಸ್‌ಆರ್‌ಟಿಸಿ ಯಲ್ಲಿ ಅನುಷ್ಠಾನಗೊಂಡಿರುವ ವಾಹನಗಳ ಸುಗಮ ಕಾರ್ಯಾಚರಣೆ, ತಾಂತ್ರಿಕ ನಿರ್ವಹಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಹೆಚ್‌ಆರ್‌ಎಂಎಸ್ ವ್ಯವಸ್ಥೆ, ಬಸ್ ನಿಲ್ದಾಣ ಮತ್ತು ಘಟಕಗಳ ಕಾಮಗಾರಿ ಪದ್ಧತಿ, ಬಸ್ ಬ್ರ್ಯಾಂಡಿಂಗ್, ಹಾಗೂ ಬಸ್ಸುಗಳ ಪುನಶ್ಚೇತನ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು.

ಕೆಎಸ್‌ಆರ್‌ಟಿಸಿ ಯ ಹೆಚ್‌ಆರ್‌ಎಂಎಸ್ ಹಾಗೂ ತಾಂತ್ರಿಕ ಉಪಕ್ರಮಗಳು ಅತ್ಯಂತ ಸಮರ್ಥವಾಗಿರುವುದಾಗಿ ದೆಹಲಿ ರಸ್ತೆ ಸಾರಿಗೆ ಸಂಸ್ಥೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಗಳನ್ನು ದೆಹಲಿ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳುವುದಾಗಿ ತಿಳಿಸಿದೆ. ಬಸ್ಸುಗಳ ಪುನಶ್ಚೇತನ ಕಾರ್ಯದ ನವೀಕೃತ ವಿಧಾನಗಳಿಗೂ ಶ್ಲಾಘನೆ ದೊರೆಯಿತು. ಕೆಎಸ್‌ಆರ್‌ಟಿಸಿ ಉಪಕ್ರಮಗಳ ಅಧ್ಯಯನಕ್ಕಾಗಿ ವಿಶೇಷ ತಂಡವನ್ನು ನಿಯೋಜಿಸುವುದಾಗಿ ದೆಹಲಿ ಇಲಾಖೆ ತಿಳಿಸಿದೆ.

ಈ ಸಂದರ್ಭದಲ್ಲಿ ಡಾ. ನಂದಿನಿದೇವಿ ಕೆ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಇಬ್ರಾಹಿಂ ಮೈಗೂರ, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ), ಹಾಗು ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ಹನೀಶ್ ಮತ್ತು ದೇವೆಂದ್ರ ಪ್ರತಾಪ್ ಸಿಂಗ್, ಹಿರಿಯ ವ್ಯವಸ್ಥಾಪಕರು ಹಾಗೂ ನಿಗಮದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.




Post Comment