ಬೆಂಗಳೂರು, ನ.12:
ರಾಜ್ಯದ ಸಾರಿಗೆ ಇಲಾಖೆಯ ಮತ್ತೊಂದು ಜನಪರ ಉಪಕ್ರಮಕ್ಕೆ ಇಂದು ಚಾಲನೆ ದೊರೆತಿದೆ. ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು–ದಾವಣಗೆರೆ ನಡುವೆ ನೇರ ಫ್ಲೈಬಸ್ (ವೋಲ್ವೋ ಮಲ್ಟಿ ಆಕ್ಸೆಲ್) ಸೇವೆಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, “ನಾನು ಸಾರಿಗೆ ಸಚಿವರಾಗಿ ಮೊದಲ ಅವಧಿಯಲ್ಲಿ 2013ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಮೊದಲ ಬಾರಿಗೆ ಫ್ಲೈಬಸ್ ಸೇವೆ ಪ್ರಾರಂಭಿಸಿದ್ದೆ. ನಂತರ ಮಡಿಕೇರಿ ಮತ್ತು ಕುಂದಾಪುರಕ್ಕೂ ಈ ಸೇವೆ ವಿಸ್ತರಿಸಲಾಯಿತು. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಿ ಜನರು ಹೆಚ್ಚಾಗಿ ಬಳಸುವಂತಾಗುವುದು ನಮ್ಮ ಪ್ರಮುಖ ಗುರಿ. ಈಗ ಬೆಂಗಳೂರು–ದಾವಣಗೆರೆ ನಡುವೆ ನೇರ ಸಂಪರ್ಕ ಕಲ್ಪಿಸಲಾಗಿದೆ” ಎಂದು ಹೇಳಿದರು.
ಪ್ರಸ್ತುತ ರಾಜ್ಯ ರಸ್ತೆ ಸಾರಿಗೆ ನಿಗಮವು 13 ಫ್ಲೈಬಸ್ ಮಾರ್ಗಗಳಲ್ಲಿ ಸೇವೆ ನೀಡುತ್ತಿದ್ದು, ಮೈಸೂರು (9), ಮಡಿಕೇರಿ (2), ಕುಂದಾಪುರ (2 – ಅಂಬಾರಿ ಉತ್ಸವ) ಮತ್ತು ದಾವಣಗೆರೆ (2) ಮಾರ್ಗಗಳಲ್ಲಿ ಒಟ್ಟು 44 ಟ್ರಿಪ್‌ಗಳು ಪ್ರತಿದಿನ ನಡೆಯುತ್ತಿವೆ. ಪ್ರತಿ ದಿನ ಸರಾಸರಿ 1,050 ಪ್ರಯಾಣಿಕರು ಈ ಸೇವೆಯನ್ನು ಬಳಸುತ್ತಿದ್ದಾರೆ.
ಹೊಸ ಮಾರ್ಗದ ವೇಳಾಪಟ್ಟಿ:
- ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆ — 00.45 ಹಾಗೂ 10.00 ಗಂಟೆಗೆ ಪ್ರಯಾಣ ಆರಂಭ
- ದಾವಣಗೆರೆಯಿಂದ ಬೆಂಗಳೂರು ವಿಮಾನ ನಿಲ್ದಾಣ — 08.00 ಹಾಗೂ 17.00 ಗಂಟೆಗೆ ಪ್ರಯಾಣ ಆರಂಭ
ಮಾರ್ಗ: ಕೆಐಎಲ್ > ಸ್ಯಾಟಲೈಟ್ ಟೌನ್ ರಿಂಗ್ ರೋಡ್ > ದೊಡ್ಡಬಳ್ಳಾಪುರ ಬೈಪಾಸ್ > ಡಾಬಸ್ ಪೇಟೆ > ತುಮಕೂರು ಬೈಪಾಸ್ > ಚಿತ್ರದುರ್ಗ ಬೈಪಾಸ್ > ದಾವಣಗೆರೆ
ಮಧ್ಯ ಪಿಕಪ್ ಪಾಯಿಂಟ್‌ಗಳು — ತುಮಕೂರು ಬೈಪಾಸ್ ಮತ್ತು ಚಿತ್ರದುರ್ಗ ಬೈಪಾಸ್
ದರ ವಿವರ:
ತುಮಕೂರು ₹400 | ಚಿತ್ರದುರ್ಗ ₹980 | ದಾವಣಗೆರೆ ₹1250
ಪ್ರಯಾಣಿಕರಿಗೆ ಉಚಿತ ನಂದಿನಿ ಸ್ನ್ಯಾಕ್ಸ್ ಕಿಟ್:
2025ರ ನವೆಂಬರ್ 15ರಿಂದ ಎಲ್ಲಾ ಫ್ಲೈಬಸ್ ಪ್ರಯಾಣಿಕರಿಗೆ ಕೆಎಂಎಫ್ (KMF) ನಿಂದ ಉಚಿತ ನಂದಿನಿ ಸ್ನ್ಯಾಕ್ಸ್ ಕಿಟ್ ವಿತರಿಸಲಾಗುತ್ತದೆ. ಕಿಟ್‌ನಲ್ಲಿ ನೀರಿನ ಬಾಟಲ್, ಫ್ಲೇವರ್ಡ್ ಮಿಲ್ಕ್, ಕುಕೀಸ್ (ಸಿಹಿ ಮತ್ತು ಕಾರಾ), ಕೇಕ್ ಹಾಗೂ ಕೋಡುಬಳೆ ಪ್ಯಾಕ್ ಇರಲಿದೆ.
ಕಿಟ್ ಪ್ಯಾಕ್‌ನಲ್ಲಿ ನಿಗಮದ ಪ್ರಮುಖ ಸೇವೆಗಳ ಮಾಹಿತಿ ಹಾಗೂ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗಾಗಿ QR ಕೋಡ್ ಮುದ್ರಿಸಲಾಗಿದೆ.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕಿ ಡಾ. ಕೆ. ನಂದಿನಿ ದೇವಿ, ನಿರ್ದೇಶಕ ಇಬ್ರಾಹಿಂ ಮೈಗೂರ, ಕೆನೆತ್ (ಮುಖ್ಯ ವಾಣಿಜ್ಯ ಅಧಿಕಾರಿ, KIAL), ಪ್ರವತ್ (ಉಪಾಧ್ಯಕ್ಷರು, ವಾಣಿಜ್ಯ, KIAL), ಸಂಜಯ್ ಚಂದ್ರ (ವ್ಯವಸ್ಥಾಪಕರು, ವಾಣಿಜ್ಯ KIAL), ಸ್ವಾತಿ ರೆಡ್ಡಿ (KMF) ಸೇರಿದಂತೆ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



Post Comment