ಹೊಸ ಬಸ್ಸು ಸೇರ್ಪಡೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ
ಧಾರವಾಡ/ಹುಬ್ಬಳ್ಳಿ: ರಾಜ್ಯದ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಇಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಜನಪರ ಮತ್ತು ಕಾರ್ಮಿಕ ಸ್ನೇಹಿ ಹಲವು ಯೋಜನೆಗಳಿಗೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ನೂತನ ನಗರ ಸಾರಿಗೆ ಬಸ್ ನಿಲ್ದಾಣವನ್ನು ರೂ.13.11 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟಿಸಲಾಯಿತು. ಹಾಗೇ ಹುಬ್ಬಳ್ಳಿ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣವನ್ನು ರೂ.23.48 ಕೋಟಿಗಳ ವೆಚ್ಚದಲ್ಲಿ ನವೀಕರಿಸಿ ಉದ್ಘಾಟಿಸಲಾಯಿತು. ಇವುಗಳಲ್ಲಿ ಆಧುನಿಕ ಪ್ಲಾಟ್‌ಫಾರ್ಮ್‌ಗಳು, ಲಿಫ್ಟ್‌ಗಳು, ಕುಡಿಯುವ ನೀರಿನ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ಉಪಹಾರ ಗೃಹ, ಮಹಿಳೆಯರಿಗಾಗಿ ಶಿಶು ಪಾಲನಾ ಕೊಠಡಿ ಹಾಗೂ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಹೊಸ ಬಸ್ಸುಗಳ ಸೇರ್ಪಡೆ
2025-26ನೇ ಸಾಲಿನಲ್ಲಿ ಸಂಸ್ಥೆಗೆ 700 ಹೊಸ ಬಸ್ಸುಗಳ ಸೇರ್ಪಡೆ ಯೋಜನೆ ಕೈಗೊಂಡಿದ್ದು, ಮೊದಲ ಹಂತದಲ್ಲಿ 300 ಬಸ್ಸುಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ನಗರ ಸೇವೆ ಮತ್ತು ಸ್ಲೀಪರ್ ಸೇವೆಗೆ 45 ಹೊಸ ವಾಹನಗಳನ್ನು ಖರೀದಿ ಮಾಡುವ ಕೆಲಸ ಮುಂದುವರಿದಿದೆ. ಇಂದು 11 ಹೊಸ ನಗರ ಸಾರಿಗೆ ಬಸ್ಸುಗಳನ್ನು ಲೋಕಾರ್ಪಣೆ ಮಾಡಲಾಯಿತು.
ETM ಡಿಜಿಟಲ್ ಟಿಕೆಟ್ ವ್ಯವಸ್ಥೆಗೆ ಚಾಲನೆ
ಪ್ರಯಾಣಿಕರಿಗೆ ನಗದು ರಹಿತ ಸೇವೆ ಒದಗಿಸಲು, QR ಕೋಡ್, RFID, NCMC ಕಾರ್ಡ್‌ಗಳನ್ನು ಓದಲು ಅನುವುಸುಗೊಳಿಸಿರುವ 5600 Android ಆಧಾರಿತ ಸ್ಮಾರ್ಟ್ ETM ಗಳು ಸಂಸ್ಥೆಯ ಎಲ್ಲಾ ಘಟಕಗಳಲ್ಲಿ ಅಳವಡಿಕೆ ಪ್ರಾರಂಭಿಸಲಾಯಿತು.
ನೌಕರರ ಕಲ್ಯಾಣಕ್ಕೆ ಆದ್ಯತೆ
ಅಪಘಾತ ರಹಿತ ಸೇವೆ ಸಲ್ಲಿಸಿದ 79 ಚಾಲಕರಿಗೆ ಬೆಳ್ಳಿ ಪದಕ ಮತ್ತು ನಗದು ಬಹುಮಾನ ವಿತರಿಸಲಾಯಿತು.
ಅಪಘಾತದಲ್ಲಿ ಮೃತರಾದ ನೌಕರರ 3 ಕುಟುಂಬಗಳಿಗೆ ತಲಾ ರೂ.1 ಕೋಟಿ,
ಸಾಮಾನ್ಯ ವಿಮಾ ಯೋಜನೆಯಡಿ 3 ಕುಟುಂಬಗಳಿಗೆ ತಲಾ ರೂ.6 ಲಕ್ಷ,
ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿ 8 ಕುಟುಂಬಗಳಿಗೆ ತಲಾ ರೂ.5 ಲಕ್ಷ,
ಅನುಕಂಪ ಆಧಾರದ ಮೇಲೆ 35 ಕುಟುಂಬಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಲಾಯಿತು.
ಇದೇ ವೇಳೆ, SBI ರವರಿಂದ ನೇರ ನಗದು ಸಂಗ್ರಹಣಾ Cash Pickup ಸೇವೆಯನ್ನು ಧಾರವಾಡ ಘಟಕದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ಸಂತೋಷ ಲಾಡ್, ಭರಮಗೌಡ (ರಾಜು) ಅಲಗೌಡ ಕಾಗೆ, ಮಹೇಶ ಟೆಂಗಿನಕಾಯಿ, ಅರವಿಂದ ಚಂದ್ರಕಾಂತ ಬೆಲ್ಲದ, ಸಲೀಂ ಅಹ್ಮದ್, ಸೈಯದ್ ಅಜೀಮ್ ಪೀರ್ ಎಸ್. ಖಾದ್ರಿ, ಪ್ರದೀಪ ಶೆಟ್ಟರ, ಎಫ್. ಎಚ್. ಜಕ್ಕಪ್ಪನವರ, ಜ್ಯೋತಿ ಪಾಟೀಲ್, ಎಸ್. ಆರ್. ಪಾಟೀಲ, ಸುನೀಲ ಜೆ. ಹನುಮಣ್ಣನವರ್, ಶಾಕಿರ್ ಸನದಿ, ಸಂಗಮೇಶ ಅಪ್ಪಾಸಿ ಬಬಲೇಶ್ವರ, ಪ್ರಿಯಾಂಕಾ ಎಂ. ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.



Post Comment