ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಉತ್ತಮ ಆರೋಗ್ಯ, ಒತ್ತಡ ನಿವಾರಣೆ ಮತ್ತು ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಿರುವ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನವೆಂಬರ್ 13ರಂದು ಭರ್ಜರಿ ಚಾಲನೆ ದೊರೆಯಿತು.

ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಸ್ವತಃ ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ವಿಜೇತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ಕಾರ್ಯಕ್ರಮದಲ್ಲಿ 15 ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಲಿದ್ದಾರೆ. ಇಂತಹ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವಗಳು ಒತ್ತಡ ನಿವಾರಣೆಗೂ, ಸಹೋದ್ಯೋಗಿಗಳ ನಡುವೆ ಸ್ನೇಹ ಹಾಗೂ ಒಗ್ಗಟ್ಟನ್ನು ಬೆಳೆಸಲು ಸಹಾಯಕವಾಗುತ್ತವೆ ಎಂದರು.

ಪ್ರತಿ ವರ್ಷ ಘಟಕ, ವಿಭಾಗ, ಪ್ರಾದೇಶಿಕ ಕಾರ್ಯಾಗಾರ ಹಾಗೂ ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಅವರ ಮಕ್ಕಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ನಿಧಿಯಿಂದ ವಿಭಾಗ/ಕಾರ್ಯಾಗಾರಗಳಿಗೆ ತಲಾ ರೂ. 40,000/- ರಂತೆ 17 ವಿಭಾಗಗಳಿಗೆ ಹಾಗೂ 2 ಕಾರ್ಯಾಗಾರಗಳಿಗೆ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡಲಾಗಿದೆ.

ಕಳೆದ ವರ್ಷ ಸದರಿ ಕ್ರೀಡಾ ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲಾಗಿದ್ದು, ನೌಕರರು ಪ್ರತಿದಿನ ಈ ಕ್ರೀಡಾ ಸಂಕೀರ್ಣವನ್ನು ಉಪಯೋಗಿಸಿಕೊಂಡು ಚೆಸ್, ಕೇರಂ, ಶೆಟಲ್, ಟೇಬಲ್ ಟೆನ್ನಿಸ್ ಮುಂತಾದ ಆಟಗಳನ್ನು ಆಡುವ ಮೂಲಕ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಈ ಬಾರಿ ನಡೆದ ಉತ್ಸವದಲ್ಲಿ ನೌಕರರು ಹಾಗೂ ಅಧಿಕಾರಿಗಳಿಗಾಗಿ ಚೆಸ್, ಕೇರಂ, ಶೆಟಲ್, ಟೇಬಲ್ ಟೆನ್ನಿಸ್, ಸಂಗೀತ ಸ್ಪರ್ಧೆಗಳು, ಸಂಗೀತ ಕುರ್ಚಿ, ಗುಂಡು ಎಸೆತ, ವೇಗ ನಡಿಗೆ, ಮಡಿಕೆ ಹೊಡೆಯುವ ಆಟ ಸೇರಿದಂತೆ ಅನೇಕ ಕ್ರೀಡಾ ಮತ್ತು ಮನೋರಂಜನಾ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು.
ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ನವೆಂಬರ್ 10ರಿಂದ 15ರವರೆಗೆ ನಡೆಯುತ್ತಿರುವ ಈ ಉತ್ಸವದಲ್ಲಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, ನೌಕರರಲ್ಲಿನ ತಂಡಭಾವನೆ ಮತ್ತು ಉತ್ಸಾಹ ಹೆಚ್ಚುವಂತಾಗಿದೆ ಎಂದು ನಿಗಮದ ಪ್ರಕಟನೆ ತಿಳಿಸಿದೆ.







Post Comment