ಸವಳಸಂಗವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ವಿಶೇಷ ಅನುದಾನಕ್ಕೆ ಪ್ರಯತ್ನ: ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ
ಇಂಡಿ, ಆ.30: ಇಂಡಿ ತಾಲ್ಲೂಕಿನ ಸವಳಸಂಗದಲ್ಲಿ ನಿರ್ಮಿಸಲಾದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನವನ್ನು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಲೋಕಾರ್ಪಣೆ ಮಾಡಿದರು. ಪರಮಪೂಜ್ಯ ಶ್ರೀ ಬಸಲಿಂಗ ಸ್ವಾಮೀಜಿ ಹಾಗೂ ಶ್ರೀ ಸಿದ್ದಲಿಂಗ ದೇವರು ತಾಳಿಕೋಟಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ “ಪ್ರಕೃತಿಯಲ್ಲಿಯೇ ದೇವರನ್ನು ಕಾಣಬೇಕು” ಎಂಬ ಸಂದೇಶ ಇಂದಿನ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದರು. ಮರ-ಗಿಡಗಳನ್ನು ಬೆಳೆಸುವುದು ಕೇವಲ ಪರಿಸರ ಸಂರಕ್ಷಣೆಯಲ್ಲ, ಮುಂದಿನ ಪೀಳಿಗೆಯ ಬದುಕನ್ನು ಸುರಕ್ಷಿತಗೊಳಿಸುವ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಿದ್ದೇಶ್ವರ ಸ್ವಾಮೀಜಿಯವರ ಆಶಯದಂತೆ ಸವಳಸಂಗದ ಬರಡು ಗುಡ್ಡವನ್ನು ಹಸಿರು ಪ್ರದೇಶವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಶಾಸಕ ಯಶವಂತರಾಯಗೌಡ ಪಾಟೀಲರು ಕೈಗೊಂಡಿರುವುದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಗಳ ಮಾತನ್ನು ಹೃದಯದಲ್ಲಿಟ್ಟುಕೊಂಡು ಈ ಪ್ರದೇಶಕ್ಕೆ ನೀರು ತಂದು ಹಸಿರು ಲೋಕ ನಿರ್ಮಿಸುವ ನಿಟ್ಟಿನಲ್ಲಿ ಶಾಸಕರು ಕೈಗೊಂಡ ಕಾರ್ಯ ಇಂದು ಫಲ ನೀಡುತ್ತಿದೆ ಎಂದರು.
ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಆಲಮಟ್ಟಿ–ಕೃಷ್ಣಾ ನದಿಯಿಂದ ಪೈಪ್ಲೈನ್ ಮೂಲಕ ನೀರು ಹರಿಸಲು ವಿಶೇಷ ಆಸಕ್ತಿ ವಹಿಸಲಾಗಿದೆ. ಒಂದು ಕಾಲದಲ್ಲಿ ಬರಡು ಗುಡ್ಡವಾಗಿದ್ದ ಪ್ರದೇಶ ಇಂದು ಹಸಿರಿನಿಂದ ಕಂಗೊಳಿಸುತ್ತಿದೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ 33,500 ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆ ಇರುವ ಹಿನ್ನೆಲೆಯಲ್ಲಿ ಇಂತಹ ಹಸಿರೀಕರಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ. ಸವಳಸಂಗವನ್ನು ಈ ಭಾಗದ ಪ್ರಮುಖ ಪ್ರವಾಸಿ ತಾಣವನ್ನಾಗಿ ಹಾಗೂ ಇಂಡಿಯನ್ನು ಮಡಿಕೇರಿಯಂತೆ ಹಸಿರು ಪ್ರದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ವಿಶೇಷ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸವಳಸಂಗದಲ್ಲಿ ಮಕ್ಕಳಿಗಾಗಿ ಆಟದ ಮೈದಾನ, ವಿದ್ಯಾರ್ಥಿಗಳಿಗೆ ವಿಜ್ಞಾನ ವನ ಮತ್ತು ಸೈನ್ಸ್ ಪಾರ್ಕ್, ಯುವಕರಿಗಾಗಿ ಜಿಪ್ಲೈನ್, ವೀಕ್ಷಣಾ ಗೋಪುರ ಹಾಗೂ ಸಾರ್ವಜನಿಕರಿಗೆ ವಿಶ್ರಾಂತಿ ಸ್ಥಳಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
“ಇದು ಕೇವಲ ವೃಕ್ಷೋದ್ಯಾನವಲ್ಲ; ಮಕ್ಕಳಿಗೆ ಆಟದ ತಾಣ, ವಿದ್ಯಾರ್ಥಿಗಳಿಗೆ ಕಲಿಕೆಯ ತಾಣ, ಯುವಕರಿಗೆ ಸಾಹಸದ ತಾಣ ಹಾಗೂ ಎಲ್ಲರಿಗೂ ಪ್ರಕೃತಿಯೊಂದಿಗೆ ಬೆರೆಯುವ ಸುಂದರ ತಾಣವಾಗಿದೆ” ಎಂದು ಸಚಿವರು ಹೇಳಿದರು.
ಅರಣ್ಯ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಸಿರಾಗಿಸಬೇಕು ಎಂದು ಕರೆ ನೀಡಿದರು.
ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ವೃಕ್ಷೋದ್ಯಾನವು ಅವರ ಪರಿಸರ ಪ್ರೀತಿಯ ಶಾಶ್ವತ ಸ್ಮಾರಕವಾಗಿ ಬೆಳೆಯಲಿ. ಸವಳಸಂಗ ಇನ್ನಷ್ಟು ಹಸಿರಾಗಿ ವಿಜಯಪುರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಹಾರೈಸಿದರು.



Post Comment