ನವದೆಹಲಿಯಲ್ಲಿ ಡಿಸೆಂಬರ್ 16, 2025ರಂದು ಮೋಟಾರಿಂಗ್ ವರ್ಲ್ಡ್ ಮ್ಯಾಗಜಿನ್ (ಡೆಲ್ಲಿ ಪ್ರೆಸ್ ಗ್ರೂಪ್) ಆಯೋಜಿಸಿದ್ದ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್–2025 ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಒಟ್ಟು ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಸಮಾರಂಭದ ಮುಖ್ಯ ಅತಿಥಿಯಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಹವಾಮಾನ ನೀತಿ ತಜ್ಞರಿಂದ ಆಯ್ಕೆಗೊಂಡ ಈ ಪ್ರಶಸ್ತಿಗಳಲ್ಲಿ ಕರ್ನಾಟಕವು ವಿದ್ಯುತ್ ವಾಹನ (EV) ಸ್ವೀಕಾರ, ಸಾರ್ವಜನಿಕ ಸಾರಿಗೆ ಹಾಗೂ ಚಾರ್ಜಿಂಗ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಾಗಿ ಪ್ರಶಂಸಿತವಾಗಿದೆ.
ಪ್ರಶಸ್ತಿ ವಿವರಗಳು:
BEST STATE FOR TWO WHEELER EV ADOPTION (Silver):
ದ್ವಿಚಕ್ರ ವಿದ್ಯುತ್ ಚಾಲಿತ ವಾಹನಗಳ ನೋಂದಣಿ ಹಾಗೂ ವಿದ್ಯುತೀಕರಣದಲ್ಲಿ ಮುಂಚೂಣಿಯ ಸಾಧನೆಗಾಗಿ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ (RTO)ಗೆ ಬೆಳ್ಳಿ ಪ್ರಶಸ್ತಿ ಲಭಿಸಿದೆ.
BEST STATE FOR 4 WHEELER EV ADOPTION (Silver):
ನಾಲ್ಕು ಚಕ್ರ ವಿದ್ಯುತ್ ಚಾಲಿತ ವಾಹನಗಳ ನೋಂದಣಿಯಲ್ಲಿ 6% ಸಾಧನೆ ಹಾಗೂ ನವೀನ ಪರಿಸರ ವ್ಯವಸ್ಥೆ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ (RTO)ಗೆ ಬೆಳ್ಳಿ ಪ್ರಶಸ್ತಿ ಲಭಿಸಿದೆ.
BEST CITY FOR EV BUS ADOPTION (Silver):
ಬೆಂಗಳೂರು ನಗರದಲ್ಲಿ 1,568ಕ್ಕಿಂತ ಹೆಚ್ಚು ವಿದ್ಯುತ್ ಚಾಲಿತ ಬಸ್ಸುಗಳನ್ನು ಸಂಯೋಜಿತ ಬಹುಮಾದರಿ ಯೋಜನೆಯಡಿ ಅಳವಡಿಸಿಕೊಂಡಿರುವುದಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಬೆಳ್ಳಿ ಪ್ರಶಸ್ತಿ ಲಭಿಸಿದೆ.
BEST STATE OF EV CHARGING INFRASTRUCTURE (Gold):
ರಾಜ್ಯಾದ್ಯಂತ 6,000ಕ್ಕೂ ಹೆಚ್ಚು ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ ದೇಶದಲ್ಲೇ ಮೊದಲ ಸ್ಥಾನ ಪಡೆದಿರುವುದಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM)ಗೆ ಚಿನ್ನದ ಪ್ರಶಸ್ತಿ ಲಭಿಸಿದೆ.
ಈ ನಾಲ್ಕೂ ಪ್ರಶಸ್ತಿಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಟಕ ಸರ್ಕಾರಕ್ಕೆ ಪ್ರದಾನಿಸಿದರು. ಸಮಾರಂಭದಲ್ಲಿ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು. ಗ್ರೀನ್ ಮೊಬಿಲಿಟಿ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ದೇಶಕ್ಕೆ ಮಾದರಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.



Post Comment