ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ 70ನೇ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಸನ್ಮಾನ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕನ್ನಡ ಕ್ರಿಯಾ ಸಮಿತಿ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಶಾಂತಿನಗರದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕನ್ನಡ ಚಳುವಳಿಗಾರರು ಹಾಗೂ ನಿರ್ಮಾಪಕರಾದ ಸಾ.ರಾ.ಗೋವಿಂದು, ಮುಖ್ಯ ಸಂಚಾರ ವ್ಯವಸ್ಥಾಪಕರಾದ ಜೆ. ಅಂತೋನಿ ಜಾರ್ಜ್, ವಿಭಾಗೀಯ ನಿಯಂತ್ರಾಧಿಕಾರಿಗಳಾದ ಬಿ.ಎಸ್. ನಾಗರಾಜ್ ಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಗೌರವ ಅಧ್ಯಕ್ಷರಾದ ವ.ಚ. ಚನ್ನೇಗೌಡ, ರಾಜ್ಯಾಧ್ಯಕ್ಷರಾದ ಕೆ.ಎಸ್. ಪ್ರಭುಸ್ವಾಮಿ ಹಾಗೂ ವಲಯ ಅಧ್ಯಕ್ಷರಾದ ಕೆ.ಎಸ್.ಎಂ. ಹುಸೇನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್, ಕನ್ನಡ ಪರಿಚಾರಕರಾದ ಹೆಚ್.ಎನ್. ರಮೇಶ್ ಬಾಬು ಮತ್ತು ಸಂಗೀತ ಗಮಕ ವಿದ್ವಾನ್ ಡಾ. ಎಂ. ಖಾಸೀಮ್ ಮಲ್ಲಿಗೆಮಡುವು ಅವರಿಗೆ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾ.ರಾ.ಗೋವಿಂದು ಅವರು, “ಭಾರತದಲ್ಲಿ ಹುಟ್ಟಬೇಕಾದರೆ ಪುಣ್ಯ ಮಾಡಿರಬೇಕು, ಕರ್ನಾಟಕದಲ್ಲಿ ಹುಟ್ಟಬೇಕಾದರೆ ತಪಸ್ಸು ಮಾಡಿರಬೇಕು” ಎಂದು ಹೇಳಿ, ಕನ್ನಡ ನಾಡು–ನುಡಿ–ನೆಲ–ಜಲ ರಕ್ಷಣೆಯಲ್ಲಿ ಕನ್ನಡಿಗರು ಇನ್ನಷ್ಟು ಎಚ್ಚರಿಕೆಯಿಂದ ಹೋರಾಟ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಆದೇಶ ಹಿಂಪಡೆಯಲ್ಪಟ್ಟ ಘಟನೆಗಳನ್ನು ಉಲ್ಲೇಖಿಸಿ, ಅನ್ಯಭಾಷಾ ದಬ್ಬಾಳಿಕೆ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಡಾ. ಡಿ.ವಿ. ಗುರುಪ್ರಸಾದ್ ಮಾತನಾಡಿ, ಸಾರಿಗೆ ಸಂಸ್ಥೆ ಲಾಭದತ್ತ ಸಾಗುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. ಕನ್ನಡ ಕ್ರಿಯಾ ಸಮಿತಿ ಕನ್ನಡ ಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು. ಖಾಸಗೀಕರಣದ ಪ್ರಯತ್ನಗಳನ್ನು ಹಲವು ಮಹನೀಯರ ಸಹಕಾರದಿಂದ ತಡೆದಿರುವುದು ಸಂಸ್ಥೆಯ ಸಾಧನೆ ಎಂದರು.
ಗೌರವ ಅಧ್ಯಕ್ಷ ವ.ಚ. ಚನ್ನೇಗೌಡ ಅವರು, 1963ರಲ್ಲಿ ಸುಭಾಷ್ ನಗರ ಬಸ್ ನಿಲ್ದಾಣದಲ್ಲಿ ಮೊದಲ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು ಎಂದು ಸ್ಮರಿಸಿ, ಕನ್ನಡ ಬಲ್ಲವರಿಗೆ ಉದ್ಯೋಗ ನೀಡುವ ಹೋರಾಟದ ಫಲವಾಗಿ ಇಂದು ಸಂಸ್ಥೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ ಎಂದರು.
ರಾಜ್ಯಾಧ್ಯಕ್ಷ ಕೆ.ಎಸ್. ಪ್ರಭುಸ್ವಾಮಿ ಅವರು, ಕಳೆದ 37 ವರ್ಷಗಳಿಂದ ಕನ್ನಡ ಕ್ರಿಯಾ ಸಮಿತಿ ನಿರಂತರ ಹೋರಾಟ ನಡೆಸುತ್ತಿದ್ದು, ಬಸ್ ಚಾಲಕರು ಹಾಗೂ ನಿರ್ವಾಹಕರು ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮೂಲಕ ಕನ್ನಡದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್.ಎಂ. ಹುಸೇನ್, ಕೇಂದ್ರೀಯ ವಿಭಾಗ ಸಮಿತಿಯ ಅಧ್ಯಕ್ಷ ಆರ್.ಟಿ. ಶಾಂತರಾಜು, ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಖಜಾಂಚಿ ರಮೇಶ್ ಡಿ.ಎಲ್. ಸೇರಿದಂತೆ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದ್ದರು.



Post Comment