ಸಾರಿಗೆ ಸಂಸ್ಥೆಗಳನ್ನು ಕೋಮಾಗೆ ತಳ್ಳಿದ್ದು ಯಾರು? ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ ಕಾಂಗ್ರೆಸ್
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸಾರಿಗೆ ಸಂಸ್ಥೆಗಳನ್ನು ದುರ್ಬಲಗೊಳಿಸಿಲ್ಲ, ಬದಲಾಗಿ ಜನಪರವಾಗಿ ಹಾಗೂ ಬಲಿಷ್ಠವಾಗಿ ರೂಪಿಸಿವೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಸಾರಿಗೆ ಸಂಸ್ಥೆಗಳು ಕೋಮಾಗೆ ಹೋಗಿವೆ ಎಂಬ BJP Karnataka ಆರೋಪಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಅಧಿಕೃತ ಅಂಕಿ-ಅಂಶಗಳೊಂದಿಗೆ ತನ್ನ ಆಡಳಿತದ ಸಾಧನೆಗಳನ್ನು ಮುಂದಿಟ್ಟಿದೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ 10,000ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿ, 4,000ಕ್ಕೂ ಹೆಚ್ಚು ಹೊಸ ಬಸ್ಗಳ ಸೇರ್ಪಡೆ ನಡೆದಿದ್ದು, ಇವೆಲ್ಲವೂ ಸರ್ಕಾರದ ಅಧಿಕೃತ ದಾಖಲೆಗಳೆಂದು ತಿಳಿಸಿದೆ. ಇದು ಪ್ರಚಾರವಲ್ಲ, ವಾಸ್ತವ ಎಂದು ಕಾಂಗ್ರೆಸ್ ಒತ್ತಿ ಹೇಳಿದೆ.
ರಾಜ್ಯ ಸರ್ಕಾರವು 4,000 ಕೋಟಿ ರೂ. ಬಾಕಿ ಉಳಿಸಿಕೊಂಡರೆ ದಿವಾಳಿ ಎನ್ನುವ ಬಿಜೆಪಿಯ ಲಾಜಿಕ್ ಪ್ರಕಾರ, ಕರ್ನಾಟಕಕ್ಕೆ ನೀರಾವರಿ ಯೋಜನೆಗಳು, ಜಲ ಜೀವನ್ ಮಿಷನ್, ನರೇಗಾ ಹಾಗೂ ತೆರಿಗೆ ಪಾಲು ಸೇರಿದಂತೆ ಹಲವು ಬಾಕಿಗಳನ್ನು ನೀಡದೆ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇನ್ನು, ಬಿಜೆಪಿಯ ಆಡಳಿತಾವಧಿಯಲ್ಲಿ ಸಾರಿಗೆ ಸಂಸ್ಥೆಗಳು ಬಲವಾಗಿದ್ದರೆ ಸಿಬ್ಬಂದಿಗಳ ಮುಷ್ಕರಗಳು ಯಾಕೆ ನಡೆದವು ಎಂಬ ಪ್ರಶ್ನೆಯನ್ನೂ ಕಾಂಗ್ರೆಸ್ ಎತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆಗಳು ಕೋಮಾಗೆ ಹೋಗಿವೆ ಎಂಬ ಆರೋಪ ನಿಜವಾಗಿದ್ದರೆ, ಅದೇ ಯೋಜನೆಗಳನ್ನು ಅಧ್ಯಯನ ಮಾಡಲು ಎನ್ಡಿಎ ಆಡಳಿತದಲ್ಲಿರುವ ರಾಜ್ಯಗಳ ಅಧಿಕಾರಿಗಳು ಕರ್ನಾಟಕಕ್ಕೆ ಬರುವ ಅಗತ್ಯವೇನು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಸಾರಿಗೆ ಸಿಬ್ಬಂದಿಗಳ ಬದುಕಿನ ಭದ್ರತೆ, ಸೇವೆಯ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಗುರುತಿಸಿ ನಿಗಮಕ್ಕೆ ಲಭಿಸಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಾರಿಗೆ ಕ್ಷೇತ್ರದ ನೈಜ ಸ್ಥಿತಿಯನ್ನು ಸ್ಪಷ್ಟಪಡಿಸುತ್ತವೆ ಎಂದು ಕಾಂಗ್ರೆಸ್ ಹೇಳಿದೆ.
ಈ ಎಲ್ಲಾ ಅಂಶಗಳು, ಬಿಜೆಪಿಯ ದುರ್ಆಡಳಿತದಲ್ಲಿ ಕೋಮಾಗೆ ತಲುಪಿದ್ದ ಸಾರಿಗೆ ಸಂಸ್ಥೆಗಳಿಗೆ ‘ಶಕ್ತಿ’ ತುಂಬಿದ್ದು ಕಾಂಗ್ರೆಸ್ ಸರ್ಕಾರವೇ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ ಎಂದು Indian National Congress Karnataka ಟ್ವೀಟ್ ಮಾಡಿದೆ.



Post Comment