×

ಅಪಘಾತ ಸಂದರ್ಭ ತ್ವರಿತ ಸ್ಪಂದನೆಗೆ ‘ಅಪಘಾತ ತುರ್ತು ಸ್ಪಂದನ ವಾಹನ’ಗಳಿಗೆ ಚಾಲನೆ

ಬೆಂಗಳೂರು: ಅಪಘಾತ ಹಾಗೂ ಅವಘಡಗಳ ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸಿ ಸಾರ್ವಜನಿಕರಿಗೆ ನೆರವು ನೀಡುವ ಉದ್ದೇಶದಿಂದ “ಅಪಘಾತ ತುರ್ತು ಸ್ಪಂದನ ವಾಹನಗಳು” (Accident Emergency Response Vehicle) ಗೆ ಇಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ನಿಗಮದ ಬಸ್ಸುಗಳು ಮಾರ್ಗಮಧ್ಯೆ ಅಪಘಾತಕ್ಕೀಡಾದಾಗ ಅಥವಾ ತಾಂತ್ರಿಕ ದೋಷದಿಂದ (ಬ್ರೇಕ್‌ಡೌನ್) ನಿಂತುಬಿಟ್ಟಾಗ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲು ಈ ವಾಹನಗಳನ್ನು ಮೊಬೈಲ್ ವರ್ಕ್‌ಶಾಪ್ ಮಾದರಿಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು. ಇದರಿಂದ ಬಸ್ಸುಗಳನ್ನು ಶೀಘ್ರವಾಗಿ ರಿಪೇರಿ ಮಾಡಿ ಸಂಚಾರವನ್ನು ಪುನಃ ಸುಗಮಗೊಳಿಸಲು ಸಾಧ್ಯವಾಗಲಿದೆ ಎಂದರು.

ಮೊದಲ ಹಂತದಲ್ಲಿ ಈ ಎರಡು ಅಪಘಾತ ತುರ್ತು ಸ್ಪಂದನ ವಾಹನಗಳನ್ನು ಬೆಂಗಳೂರು ಹಾಗೂ ಮೈಸೂರು ಕೇಂದ್ರಗಳಲ್ಲಿ ನಿಯೋಜಿಸಲಾಗುತ್ತದೆ. ಇದರಿಂದ ಬೆಂಗಳೂರು ಸುತ್ತಮುತ್ತಲಿನ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮೈಸೂರು, ಮಂಡ್ಯ ಪ್ರದೇಶಗಳಲ್ಲಿ ಉಂಟಾಗುವ ಅಪಘಾತ ಮತ್ತು ಅವಘಡಗಳಿಗೆ ವೇಗವಾಗಿ ಸ್ಪಂದಿಸಲು ಅನುಕೂಲವಾಗಲಿದೆ.

ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣಗಳಿಂದ ರಾಜ್ಯ ಹಾಗೂ ಅಂತರರಾಜ್ಯ ಮಾರ್ಗಗಳಿಗೆ ವಿವಿಧ ಮಾದರಿಯ ಬಸ್ಸುಗಳು ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ, ಮಾರ್ಗಮಧ್ಯೆ ಬಸ್ಸುಗಳು ಕೆಟ್ಟು ನಿಲ್ಲುವ ಸಂದರ್ಭಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಈ ವಾಹನಗಳು ಪ್ರಮುಖ ಪಾತ್ರ ವಹಿಸಲಿವೆ. ತಾಂತ್ರಿಕ ಸಿಬ್ಬಂದಿಗಳು ಅಗತ್ಯ ಬಿಡಿಭಾಗಗಳು ಮತ್ತು ಉಪಕರಣಗಳೊಂದಿಗೆ ತಕ್ಷಣ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯ ಕೈಗೊಳ್ಳಲು ಈ ಮೊಬೈಲ್ ವರ್ಕ್‌ಶಾಪ್ ವಾಹನಗಳು ನೆರವಾಗಲಿವೆ.

ಅಪಘಾತ ಅಥವಾ ಅವಘಡದ ಸಂದರ್ಭದಲ್ಲಿ ಚಾಲಕರು ಹಾಗೂ ನಿರ್ವಾಹಕರಿಗೆ ತಕ್ಷಣ ಸಹಾಯ ಒದಗಿಸುವುದರ ಜೊತೆಗೆ, ಗಾಯಗೊಂಡ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಸಹ ಈ ಸ್ಪಂದನ ವಾಹನಗಳು ಉಪಯುಕ್ತವಾಗಲಿವೆ.

ಪ್ರತಿ ಅಪಘಾತ ತುರ್ತು ಸ್ಪಂದನ ವಾಹನದ ಬೆಲೆ ರೂ. 7.22 ಲಕ್ಷವಾಗಿದ್ದು, ಜನವರಿ–2026ರ ಅಂತ್ಯದೊಳಗೆ ಹೆಚ್ಚುವರಿಯಾಗಿ 10 ಹೊಸ ವಾಹನಗಳನ್ನು ಸೇರ್ಪಡೆಗೊಳಿಸುವ ಯೋಜನೆ ಹೊಂದಲಾಗಿದೆ. ಇವುಗಳನ್ನು ಹಂತ ಹಂತವಾಗಿ ಉಳಿದ ಜಿಲ್ಲೆಗಳಿಗೆ ನಿಯೋಜಿಸಲಾಗುವುದು ಎಂದು ತಿಳಿಸಲಾಗಿದೆ.

ಅವಘಡಗಳ ಸಮಯದಲ್ಲಿ ತ್ವರಿತ ಸೇವೆಗಾಗಿ Ashok Leyland DOST XL High Side Deck – BS-VI ಮಾದರಿಯ ವಾಹನಗಳನ್ನು ಖರೀದಿಸಲಾಗಿದೆ. ಟರ್ಬೋ ಚಾರ್ಜ್ಡ್ ಮತ್ತು ಇಂಟರ್‌ಕೂಲ್ಡ್ ಡೀಸೆಲ್ ಎಂಜಿನ್ ಹೊಂದಿರುವ ಈ ವಾಹನಗಳು ಉತ್ತಮ ಇಂಧನ ದಕ್ಷತೆ, ಕಡಿಮೆ ಮಾಲಿನ್ಯ ಹೊರಸೂಸುವ ವ್ಯವಸ್ಥೆ ಹಾಗೂ ಸುರಕ್ಷಿತ ಸರಕು ಸಾಗಣೆಗೆ ಅನುಕೂಲವಾಗುವ ಹೈ ಸೈಡ್ ಡೆಕ್ ವಿನ್ಯಾಸವನ್ನು ಹೊಂದಿವೆ.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಭರಮಗೌಡ (ರಾಜು) ಅಲಗೌಡ ಕಾಗೆ, ವಿವಿಧ ಸಾರಿಗೆ ನಿಗಮಗಳ ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed