ಬೆಂಗಳೂರು, ಜುಲೈ 25:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ನೌಕರರ ಭದ್ರತೆ ಮತ್ತು ಕುಟುಂಬದ ಆರ್ಥಿಕ ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇಟ್ಟಿದೆ. ಇಂದು ಬಿಎಂಟಿಸಿ ಮತ್ತು ಬ್ಯಾಂಕ್ ಆಫ್ ಬರೋಡಾ ನಡುವೆ ಐದು ವರ್ಷಗಳ ಅವಧಿಗೆ ವಿಮಾ ಒಡಂಬಡಿಕೆ ಸಹಿ ಮಾಡಲಾಯಿತು.
ಈ ಒಡಂಬಡಿಕೆಯಿಂದಾಗಿ ಬಿಎಂಟಿಸಿ ನೌಕರರು ಹಾಗೂ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆಯ ವೇಳೆ ಅಥವಾ ವೈಯಕ್ತಿಕ ಅಪಘಾತದ ಸಂದರ್ಭಗಳಲ್ಲಿ ನಿಗದಿತ ಪರಿಹಾರದ ರೂಪದಲ್ಲಿ ಭದ್ರತೆ ಲಭಿಸಲಿದೆ.
ವಿಮಾ ಒಡಂಬಡಿಕೆಯ ಪ್ರಮುಖ ಸೌಲಭ್ಯಗಳು:
- ವೈಯಕ್ತಿಕ ಅಪಘಾತದ ಮರಣ – ₹1 ಕೋಟಿ
- ಕರ್ತವ್ಯ ನಿರ್ವಹಣೆಯ ವೇಳೆ ಮರಣ – ₹1.25 ಕೋಟಿ
- ವಿಮಾನ ಅಪಘಾತದ ಮರಣ – ₹1 ಕೋಟಿ
- ಶಾಶ್ವತ ಪೂರ್ಣ ಅಂಗವಿಕಲತೆ – ₹1 ಕೋಟಿ
- ಶಾಶ್ವತ ಭಾಗಶಃ ಅಂಗವಿಕಲತೆ – ₹75 ಲಕ್ಷ
- ಸ್ವಾಭಾವಿಕ ಮರಣ – ₹10 ಲಕ್ಷ
ಈ ಒಡಂಬಡಿಕೆ ಜುಲೈ 25ರಂದು ಬಿಎಂಟಿಸಿ ಮತ್ತು ಬ್ಯಾಂಕ್ ಆಫ್ ಬರೋಡಾ ನಡುವಿನ ಸಹಕಾರದ ಹೊಸ ಅಧ್ಯಾಯವಾಗಿ ದಾಖಲಾಗಿದೆ. ಒಡಂಬಡಿಕೆ ಪತ್ರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಬ್ಯಾಂಕ್ ಆಫ್ ಬರೋಡಾದ ಪ್ರಧಾನ ಮಹಾಪ್ರಬಂಧಕ ಮನೋಜ್ ಚಾಯಾಣಿ ಪರಸ್ಪರ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಮತ್ತಿತರ ಅಧಿಕಾರಿಗಳು ಹಾಗೂ ಬ್ಯಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಎಂಟಿಸಿ ನೌಕರರ ಕಲ್ಯಾಣಕ್ಕೆ ಬದ್ಧವಾಗಿದೆ ಎಂಬುದನ್ನು ಈ ಒಡಂಬಡಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ. ಸಂಸ್ಥೆಯು ಮುಂದಿನ ದಿನಗಳಲ್ಲೂ ನೌಕರರಿಗಾಗಿ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಲಿದೆ.



Post Comment