ಐದು ಹೊಸ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜುಲೈ 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ಇಂದು ಸಂಭ್ರಮದ ಸಮಾರಂಭ ಜರಗಿದ್ದು, ಹಲವು ಮಹತ್ವದ ಕಾರ್ಯಕ್ರಮಗಳು ನಡೆದವು. ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಉಪಾಧ್ಯಕ್ಷರಾದ ಮೊಹಮ್ಮದ್ ರಿಜ್ವಾನ್ ನವಾಬ್, ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದರು.

ಅನುಕಂಪದ ಆಧಾರದ ನೇಮಕಾತಿ: ಅಪಘಾತ ಅಥವಾ ಇತರೆ ಕಾರಣಗಳಿಂದ ಮೃತಪಟ್ಟ ನಿಗಮದ ಸಿಬ್ಬಂದಿಗಳ ಕುಟುಂಬದ ಸದಸ್ಯರಿಗೆ ನೆರವಾಗುವ ನಿಟ್ಟಿನಲ್ಲಿ, 45 ಅಭ್ಯರ್ಥಿಗಳಿಗೆ ಕರಾಸಾ ಪೇದೆ ಹುದ್ದೆಗೆ ನೇಮಕಾತಿ ಆದೇಶ ವಿತರಿಸಲಾಯಿತು. ಕಳೆದ ಒಂದು ವರ್ಷದಲ್ಲಿ ಈ ರೀತಿಯಲ್ಲಿ 271 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ನಿಗಮದ ನಿಷ್ಠಾವಂತ ಸಿಬ್ಬಂದಿಯ ಕುಟುಂಬದ ನೆಲೆಯಾದ ನಿಗಮ ತನ್ನ ಜವಾಬ್ದಾರಿಯನ್ನು ಪೂರೈಸುತ್ತಿದೆ ಎಂದು ಸಚಿವರು ಹೇಳಿದರು.

ಪರಿಹಾರ ಧನ ವಿತರಣೆ:
ಕರ್ತವ್ಯದ ವೇಳೆ ಅಪಘಾತಕ್ಕೆ ಒಳಗಾಗಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ರೂ.1 ಕೋಟಿ ಪರಿಹಾರ ಚೆಕ್ ವಿತರಿಸಲಾಯಿತು.
ಇತರೆ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟ 26 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷಗಳಂತೆ, ಒಟ್ಟು ರೂ.2.60 ಕೋಟಿ ಪರಿಹಾರ ವಿತರಣೆ ಮಾಡಲಾಯಿತು.
ಇತ್ತೀಚೆಗೆ ಪರಿಹಾರ ಮೊತ್ತವನ್ನು ರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದುವರೆಗೆ 151 ಕುಟುಂಬಗಳಿಗೆ ರೂ.15.10 ಕೋಟಿ ಪರಿಹಾರ ವಿತರಿಸಲಾಗಿದೆ.
ಸಾರಿಗೆ ಸುರಕ್ಷಾ ಯೋಜನೆ: ಸಿಬ್ಬಂದಿಯ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಇತ್ತೀಚೆಗೆ ಒಟ್ಟು 27 ಕುಟುಂಬಗಳಿಗೆ ರೂ.27 ಕೋಟಿ ಪರಿಹಾರ ವಿತರಿಸಲಾಗಿದೆ.
ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸುಗಳ ಉದ್ಘಾಟನೆ: ನೂತನ ತಂತ್ರಜ್ಞಾನ, ಸುಧಾರಿತ ಬ್ಲೈಂಡ್ ಸ್ಪಾಟ್ ದೂರವೀಕ್ಷಣಾ ವ್ಯವಸ್ಥೆ, ಹೆಚ್ಚಿನ ಲಗೇಜ್ ಸ್ಥಳ ಮತ್ತು ಪ್ಯಾಸೆಂಜರ್ ಸೆಫ್ಟಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ ಐದು ಐರಾವತ ಕ್ಲಬ್ ಕ್ಲಾಸ್ 2.0 ವೋಲ್ವೋ ಬಸ್ಸುಗಳನ್ನು ಚಾಲನೆಗೊಳಿಸಲಾಯಿತು. ಈ ಬಸ್‌ಗಳು ಬೆಂಗಳೂರು-ತಿರುಪತಿ (1), ಮಂಗಳೂರು-ಬೆಂಗಳೂರು (2), ಮೈಸೂರು-ಮಂತ್ರಾಲಯ (2) ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿವೆ.

ಸಚಿವರ ಸಂದೇಶ: “ಮೃತ ಸಿಬ್ಬಂದಿಯ ಜೀವ ಮೌಲ್ಯ ಅಪಾರವಾದದ್ದು. ಅವರನ್ನು ಮರಳಿ ಕರೆತರುವುದು ಸಾಧ್ಯವಿಲ್ಲ, ಆದರೆ ಅವರ ಕುಟುಂಬದ ಭದ್ರತೆ ನಮ್ಮ ಕರ್ತವ್ಯ,” ಎಂದು ರಾಮಲಿಂಗಾ ರೆಡ್ಡಿ ಹೇಳಿದರು. ಪರಿಹಾರದ ಹಣವನ್ನು ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಸೇರಿದಂತೆ ಶ್ರೇಷ್ಠ ಕಾರ್ಯಗಳಿಗೆ ಬಳಸಬೇಕು, ಬಡ್ಡಿ ವ್ಯಾಮೋಹದಿಂದ ದೂರವಿರಿ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ, ವಾಕರಸಾ, ಕಕರಸಾ ಹಾಗೂ ಕರಾಸಾ ನಿಗಮದ ವಿವಿಧ ವಿಭಾಗಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನೌಕರರು ಉಪಸ್ಥಿತರಿದ್ದರು.



Post Comment