ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ನಡೆಸಿದ ಅಪಪ್ರಚಾರ ಬಯಲಾಗಿದ್ದು, ಅವರ ರಾಜಕೀಯ ನಾಟಕ ಕಂಪನಿ ಈಗ ಮುಚ್ಚಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.
“ಸರ್ಕಾರ ನ್ಯಾಯಾಲಯದ ಆದೇಶದಂತೆ SIT ರಚಿಸಿದಾಗ ಮೊದಲಿಗೆ ಸ್ವಾಗತಿಸಿ, ಕ್ರೆಡಿಟ್ ಪಡೆಯಲು ಬಯಸಿದವರು ಬಿಜೆಪಿ ನಾಯಕರು. ಆದರೆ ತನಿಖೆಯಲ್ಲಿ ತಮ್ಮ ಬೆಂಬಲಿತರ ಹೆಸರುಗಳು ಕೇಳಿಬಂದಾಗಲೆಲ್ಲಾ ತನಿಖೆಯನ್ನು ತಪ್ಪಿಸಲು NIAಗೆ ವಹಿಸಬೇಕು ಎಂದು ಕೂಗಾಡಿದರು. ನೂರಾರು ಕಾರುಗಳಲ್ಲಿ ಮೋಜುಮಸ್ತಿ ಮಾಡಿ, ಧರ್ಮಸ್ಥಳದ ಬೆಂಬಲದಲ್ಲಿದ್ದೇವೆ ಎಂಬ ನಾಟಕ ಮಾತ್ರ ಮಾಡಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದರು.
ಅವರು ಮುಂದುವರಿಸಿ, “ಸತ್ಯ ಹೊರಬರುವುದು ಬಿಜೆಪಿಗೆ ಬೇಡ. ರಾಜಕಾರಣ ಮಾಡಲು ವಿಷಯ ಬೇಕು. ದಕ್ಷ ಅಧಿಕಾರಿಗಳು ಸಂಚಿನ ಹಿಂದಿರುವ ಸತ್ಯವನ್ನು ಬಯಲಿಗೆಳೆಯುತ್ತಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ವತಃ SIT ತನಿಖೆಯನ್ನು ಶ್ಲಾಘಿಸಿ ‘ಸತ್ಯ ಹೊರಬರುತ್ತಿದೆ, ಸರ್ಕಾರಕ್ಕೆ ಧನ್ಯವಾದಗಳು’ ಎಂದಿದ್ದಾರೆ. ಇಂತಹ ಸಂದರ್ಭದಲ್ಲೂ ಬಿಜೆಪಿ ನಾಯಕರು ಬೀದಿಗಿಳಿದು ವಿರೋಧಿಸಿದದ್ದು ಕೀಳುಮಟ್ಟದ ರಾಜಕಾರಣದ ಉದಾಹರಣೆ” ಎಂದು ಹೇಳಿದರು.
“ನಮ್ಮ ಸರ್ಕಾರ ಸತ್ಯ ಹೊರತರುವ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ. ಸಂಚಿನ ಹಿಂದಿರುವ ಅಸಲಿ ರೂವಾರಿಗಳು ಹಾಗೂ ಅವರ ರಾಜಕೀಯ ಪೋಷಕರು ಶೀಘ್ರದಲ್ಲೇ ಜನರ ಮುಂದೆ ಬಯಲಾಗಲಿದ್ದಾರೆ” ಎಂದು ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಸಿದರು.



Post Comment