ಗೋವಾ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ಭಾರತೋಯ ಸಾರ್ವಜನಿಕ ಸಂಪರ್ಕ ಮಂಡಳಿ (PRCI) ವತಿಯಿಂದ ನಡೆದ 15ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2025ರಲ್ಲಿ 9 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಶಸ್ತಿ ವಿಜೇತ ವಿಭಾಗಗಳು:
ಡಿಜಿಟಲ್ ಮೀಡಿಯಾ ಇನೋವೇಶನ್ ಮತ್ತು ಹೌಸ್ ಜರ್ನಲ್ ಪ್ರಿಂಟ್ (ಪ್ರಾದೇಶಿಕ) — ಚಿನ್ನದ ಪದಕ
ಹೆಲ್ತ್ ಕೇರ್ ಕಮ್ಯುನಿಕೇಶನ್ ಫಿಲ್ಮ್ಸ್ — ಬೆಳ್ಳಿ ಪದಕ
ವಿಶಿಷ್ಟ ಮಾನವ ಸಂಪನ್ಮೂಲ (HR) ಕಾರ್ಯಕ್ರಮ — ಕಂಚಿನ ಪದಕ
ಗ್ರಾಹಕ ಸೇವಾ ಶ್ರೇಷ್ಠತೆ, ಬ್ರ್ಯಾಂಡಿಂಗ್, ವೆಬ್‌ಸೈಟ್ ಮತ್ತು ಮೈಕ್ರೋಸೈಟ್, ಕಾರ್ಪೊರೇಟ್ ಫಿಲ್ಮ್ಸ್, ಮಾರ್ಕೆಟಿಂಗ್ ಕ್ಯಾಂಪೇನ್ ಮತ್ತು ಆಂತರಿಕ ಕಮ್ಯುನಿಕೇಶನ್ ಕ್ಯಾಂಪೇನ್ — ವಿಶೇಷ ಪ್ರಶಸ್ತಿಗಳು
ಈ ಸಾಧನೆ KSRTC ಆಧುನಿಕ ತಂತ್ರಜ್ಞಾನ, ನವೀನ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಕಾರ್ಯಾಚರಣೆಗಳಲ್ಲಿ ತನ್ನ ಶಕ್ತಿ ಮತ್ತು ಸಾಮರ್ಥ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸಿರುವುದಕ್ಕೆ ಸಾಕ್ಷಿಯಾಗಿದೆ.
ಇಂದು ಗೋವಾದ ದ ಫರ್ನ್ ಕದಂಬ ಹೋಟೆಲ್ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಡಾ. ಗಣೇಶ್ ಗಾಂವ್ಕರ್ (ಗೋವಾ ವಿಧಾನಸಭಾಧ್ಯಕ್ಷ), ನಟಿ ಮತ್ತು ಗಾಯಕಿ ಎಸ್ಟರ್ ವ್ಯಾಲೆರಿ ನೊರೊನ್ಹಾ, ನಟ-ರೂಪದರ್ಶಿ ಮಿಲಿನ್ ತೆಂಡೂಲ್ಕರ್ ಮತ್ತು PRCI ಅಧ್ಯಕ್ಷ ಎಂ.ಬಿ. ಜಯರಾಮ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
KSRTC ಪರವಾಗಿ ತುಮಕೂರು ವಿಭಾಗದ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹಾಗೂ ಚಿಕ್ಕಬಳ್ಳಾಪುರ ವಿಭಾಗದ ನಿಯಂತ್ರಣಾಧಿಕಾರಿ ಬಸವರಾಜು ಪ್ರಶಸ್ತಿಗಳನ್ನು ಸ್ವೀಕರಿಸಿದರು.
KSRTCಗೆ ಇದು ಮತ್ತೊಂದು ಅಂತರಾಷ್ಟ್ರೀಯ ಮಟ್ಟದ ಸಾಧನೆಯ ಹೆಗ್ಗಳಿಕೆಯಾಗಿದ್ದು, ಸಂಸ್ಥೆಯ ಸ್ಮಾರ್ಟ್ ಸೇವೆಗಳು ಮತ್ತು ಜನಕೇಂದ್ರೀಕೃತ ಚಟುವಟಿಕೆಗಳಿಗೆ ಲಭಿಸಿದ ಗೌರವವಾಗಿದೆ.



Post Comment