ಕಡೂರು, ಸೆ.24 – ಕಡೂರು ಬಸ್ ನಿಲ್ದಾಣ ಹಾಗೂ ತರೀಕೆರೆ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆ ಜೊತೆಗೆ ಕಡೂರು ಬಸ್ ಘಟಕದ ವಸತಿಗೃಹ ಉದ್ಘಾಟನೆ ನೆರವೇರಿತು.
ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ಕಡೂರು ಬಸ್ ನಿಲ್ದಾಣ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿ, ಸಿಬ್ಬಂದಿಗಾಗಿ ನಿರ್ಮಿಸಲಾದ ವಸತಿಗೃಹಗಳನ್ನು ಉದ್ಘಾಟಿಸಿದರು. ತರೀಕೆರೆ ಬಸ್ ನಿಲ್ದಾಣ ಆವರಣದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಯಿತು.

ಕಡೂರು ಬಸ್ ನಿಲ್ದಾಣ: 2 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ, ರೂ.12 ಕೋಟಿ ವೆಚ್ಚದಲ್ಲಿ ನಿರ್ಮಾಣ
ಸಿಬ್ಬಂದಿ ವಸತಿಗೃಹ: ರೂ.123 ಲಕ್ಷ ವೆಚ್ಚದಲ್ಲಿ 08 ವಸತಿಗೃಹಗಳ ನಿರ್ಮಾಣ
ತರೀಕೆರೆ ಬಸ್ ನಿಲ್ದಾಣ: 2 ಎಕರೆ 16 ಗುಂಟೆ ವಿಸ್ತೀರ್ಣದಲ್ಲಿ, ರೂ.9.15 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭ
“ಸಾರ್ವಜನಿಕರ ಅನುಕೂಲಕ್ಕಾಗಿ ಅತ್ಯಾಧುನಿಕ, ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಡೂರು ಮತ್ತು ತರೀಕೆರೆ ತಾಲ್ಲೂಕು ಕೇಂದ್ರಗಳಿಗೆ ಇದು ಅಗತ್ಯವಾಗಿತ್ತು” ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಕಡೂರು ಶಾಸಕರಾದ ಆನಂದ್ ಕೆ.ಎಸ್ ಹಾಗೂ ತರೀಕೆರೆ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಅವರು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್ಸುಗಳನ್ನು ಸಂಚಾರ ಮಾಡಲು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದರು.
ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್ ಅವರು ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಾರಿಗೆ ಸಂಸ್ಥೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಲೇಶ್, ತರೀಕೆರೆ ಪುರಸಭೆ ಅಧ್ಯಕ್ಷ ವಸಂತಕುಮಾರ್ ಕವಾಲಿ, ಉಪಾಧ್ಯಕ್ಷೆ ಪಾರ್ವತಮ್ಮ, ಅಜ್ಜಂಪುರ ಗ್ಯಾರಂಟಿ ಸಮಿತಿ ಅಧ್ಯಕ್ಷ ಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಹಾಜರಿದ್ದರು.



Post Comment