ಬೆಂಗಳೂರು: ನಿಗಮದ ಸಿಬ್ಬಂದಿಗಳ ಮಕ್ಕಳು ಅತ್ಯುತ್ತಮ ವಿದ್ಯಾಭ್ಯಾಸದ ಮೂಲಕ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ, ಸಾರಿಗೆ ಹಾಗೂ ಮುಜರಾಯಿ ಸಚಿವರು ಇಂದು (07.01.2026) ಆರು ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ನಿಗಮದ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್, ವಿಜ್ಞಾನ, ದಂತಚಿಕಿತ್ಸೆ ಹಾಗೂ ಕಲಾ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದು, ಹೆಚ್ಚಿನ ಅಂಕಗಳೊಂದಿಗೆ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ತಲಾ ರೂ.5,000/- ಗೌರವಧನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಜೊತೆಗೆ ಮಾನ್ಯ ಸಚಿವರು ವೈಯಕ್ತಿಕವಾಗಿ ಎಲ್ಲಾ ಆರು ವಿದ್ಯಾರ್ಥಿಗಳಿಗೆ ತಲಾ ರೂ.20,000/- ನಗದು ಬಹಮಾನ ನೀಡಿ ಅಭಿನಂದಿಸಿದರು.
ಸನ್ಮಾನಿತರಾದ ವಿದ್ಯಾರ್ಥಿಗಳಲ್ಲಿ ಡಾ. ಗಗನ ಎಂ. (ಎಂಬಿಬಿಎಸ್), ವಿಸ್ಮಯ ಟಿ.ಆರ್. (ಎಂ.ಟೆಕ್), ರೂಫಿಯಾ ಕೆ.ಎಂ. (ಎಂ.ಎಸ್ಸಿ – 7 ಚಿನ್ನದ ಪದಕ), ಸತೀಶ್ ಕುಮಾರ್ ದೊಡ್ಡಮನಿ (ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ – ಡ್ರಾಮಾ), ಡಾ. ಸಾನಿಯಾ ಬಿ.ಬಿ. (ಬಿಡಿಎಸ್ – 7 ಚಿನ್ನದ ಮತ್ತು 2 ಬೆಳ್ಳಿ ಪದಕ) ಹಾಗೂ ಟಿ. ಹರ್ಮೀನ್ (ಬಿ.ಎಸ್ಸಿ – 6 ಚಿನ್ನದ ಪದಕ) ಸೇರಿದ್ದಾರೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮಂತ್ರ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ನಿರಂತರ ಪ್ರಯತ್ನ ಅಗತ್ಯ. ನಿಮ್ಮ ಜ್ಞಾನವನ್ನು ವೈಯಕ್ತಿಕ ಲಾಭಕ್ಕೆ ಮಾತ್ರವಲ್ಲದೆ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಬಳಸಿದಾಗ ಯಶಸ್ಸು ಖಂಡಿತ ನಿಮ್ಮದಾಗುತ್ತದೆ” ಎಂದು ಹೇಳಿದರು.
ನಿಗಮದ ಚಾಲನಾ ಹಾಗೂ ತಾಂತ್ರಿಕ ಸಿಬ್ಬಂದಿಗಳು ಸಾರ್ವಜನಿಕ ಸೇವೆಗೆ ತಮ್ಮ ಹೆಚ್ಚಿನ ಸಮಯ ಮೀಸಲಿಡುವ ಶ್ರಮಜೀವಿಗಳಾಗಿದ್ದು, ಕುಟುಂಬಕ್ಕೆ ಸಮಯ ನೀಡುವುದು ಕಷ್ಟಕರವಾಗಿದ್ದರೂ ಸಹ, ಅವರ ಮಕ್ಕಳು ಪೋಷಕರ ತ್ಯಾಗವನ್ನು ಅರ್ಥ ಮಾಡಿಕೊಂಡು ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಸಚಿವರು ಪ್ರಶಂಸಿಸಿದರು. ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಎಲ್ಲಾ ಪೋಷಕರಿಗೂ ಅವರು ಅಭಿನಂದನೆ ಸಲ್ಲಿಸಿದರು.
ನಿಗಮದ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಾರಿಗೆ ತರಲಾದ ‘ಸಾರಿಗೆ ವಿದ್ಯಾಚೇತನ ಯೋಜನೆ’ಯಡಿ ಇದುವರೆಗೆ 5,450 ವಿದ್ಯಾರ್ಥಿಗಳಿಗೆ ರೂ.2.76 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿ.ಎಸ್. ಆರಾಧ್ಯ, ಉಪಾಧ್ಯಕ್ಷರಾದ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಭಾಆಸೇ., ನಿರ್ದೇಶಕರಾದ ಡಾ. ನಂದಿನಿದೇವಿ ಕೆ ಭಾಆಸೇ. ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Post Comment