ಬಸವನಗುಡಿ: ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆ ಈ ವರ್ಷ ಅಭೂತಪೂರ್ವ ಜನಸ್ತೋಮ ಸೆಳೆದಿದೆ. ಕೇವಲ ಮೂರು ದಿನಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು, ಪರಿಷೆ ಮುಕ್ತಾಯವಾಗುವ ವೇಳೆಗೆ 12 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯನ್ನು ಮುಜರಾಯಿ ಇಲಾಖೆ ವ್ಯಕ್ತಪಡಿಸಿದೆ.

ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭಗೊಂಡ ಪರಿಷೆಯನ್ನು ಈ ಬಾರಿ ಅಧಿಕೃತವಾಗಿ ಐದು ದಿನಗಳ ಕಾಲಕ್ಕೆ ವಿಸ್ತರಿಸಲಾಗಿದ್ದು, ಬಸವನಗುಡಿ, ಗಾಂಧಿ ಬಜಾರ್, ಆರ್‌ವಿ ರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಜಾತ್ರೆಯ ಸಂಭ್ರಮ ಪಸರಿಸಿತು.
ಈ ಬಾರಿ ಮೊದಲ ಬಾರಿಗೆ ವಿಶೇಷ ದೀಪಾಲಂಕಾರ ಮತ್ತು ದೇವಸ್ಥಾನದ ಹೂವಿನ ವೈಶಿಷ್ಟ್ಯಮಯ ಅಲಂಕಾರ ಭಕ್ತರ ಗಮನ ಸೆಳೆಯಿತು. ದೊಡ್ಡ ಬಸವಣ್ಣ ಹಾಗೂ ದೊಡ್ಡ ಗಣಪತಿ, ಕಾರಂಜಿ ಆಂಜನೇಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಪರಿಷೆಗೆ ಭೇಟಿ ನೀಡಿದರು.

ಬಿಬಿಎಂಪಿ ವತಿಯಿಂದ ಪ್ರತಿದಿನವೂ ಸ್ವಚ್ಛತೆ ಕಾರ್ಯ ನಡೆಯುತ್ತಿದ್ದು, ಪರಿಷೆಯಲ್ಲಿ ಒಟ್ಟು 4,500ಕ್ಕೂ ಹೆಚ್ಚು ಮಳಿಗೆಗಳು ವ್ಯಾಪಾರ ನಡೆಸುತ್ತಿವೆ. ಹಸಿ, ಹುರಿದ, ಒಣ—ವಿಭಿನ್ನ ಬಗೆಯ ಕಡಲೆಕಾಯಿ ಜೊತೆಗೆ ಕಡಲೆಕಾಯಿ ಆಧಾರಿತ ತಿಂಡಿಗಳು, ಆಟಿಕೆಗಳು, ಬೀದಿ ಭಕ್ಷ್ಯಗಳು ಜನರನ್ನು ಆಕರ್ಷಿಸಿವೆ. ಪ್ಲಾಸ್ಟಿಕ್ ಮುಕ್ತ ಪರಿಷೆಗೆ ಬೆಂಬಲವಾಗಿ ಅನೇಕರು ಬಟ್ಟೆ ಚೀಲಗಳನ್ನು ಬಳಸುತ್ತಿರುವುದು ಗಮನಾರ್ಹ.
ಭದ್ರತೆಯ ಅಂಗವಾಗಿ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 800ಕ್ಕೂ ಹೆಚ್ಚು ಪೊಲೀಸರು ನಿಯೋಜಿತರಾಗಿದ್ದಾರೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರತಿದಿನವೂ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದವರೂ ಕಡಲೆಕಾಯಿ ತಂದು ಮಾರಾಟ ಮಾಡುತ್ತಿದ್ದಾರೆ. ಮಳಿಗೆ ಶುಲ್ಕವನ್ನೂ ಈ ಬಾರಿ ವಿನಾಯಿತಿ ನೀಡಿರುವುದರಿಂದ ವ್ಯಾಪಾರಿಗಳಿಗೆ ಉತ್ತಮ ಸ್ಪಂದನೆ ದೊರಕಿದೆ.
ಒಟ್ಟಾರೆಯಾಗಿ, ಹಲವು ವೈಶಿಷ್ಟ್ಯಗಳನ್ನು ಹೊತ್ತು ತಂದಿರುವ ಈ ವರ್ಷದ ಕಡಲೆಕಾಯಿ ಪರಿಷೆ, ಬೆಂಗಳೂರಿನ ಜನಮನ ಗೆದ್ದ ಜಾತ್ರೆಯಾಗಿ ಮೆರೆಯುತ್ತಿದೆ.



Post Comment