ಬೆಂಗಳೂರು, ಮಾರ್ಚ್ 11, 2025: ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ. ಬಿಜೆಪಿಯ ಅರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗ ರೆಡ್ಡಿ ಅವರು, “ಬಿಜೆಪಿ ತಮಗೆ ಅನ್ವರ್ಥವಾಗಿರುವ ಚಿಪ್ಪು ಚೊಂಬುಗಳನ್ನು ನಮಗೆ ಅಂಟಿಸಲು ಹೊರಟಿರುವುದು ವೃಥಾ ಪ್ರಯತ್ನ. ಇದು ಫಲಿಸುವುದಿಲ್ಲ” ಎಂದು ಹೇಳಿದರು.
ಸಚಿವರು ಬಿಜೆಪಿ ಸರ್ಕಾರದ ಕಾಲದಲ್ಲಿ ಸಾರಿಗೆ ಸಂಸ್ಥೆಗಳು ಎದುರಿಸಿದ ಆರ್ಥಿಕ ಸಂಕಟಗಳನ್ನು ಎತ್ತಿ ತೋರಿಸಿದರು. “ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ ₹5,900 ಕೋಟಿ ನಷ್ಟ, ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿಗಳನ್ನು ನಾವು ತೀರಿಸಬೇಕಾಗಿದೆ” ಎಂದು ಅವರು ತಿಳಿಸಿದರು.
2023 ಮಾರ್ಚ್ನಲ್ಲಿ 38 ತಿಂಗಳ ನಂತರ ಸಂಬಳ ಏರಿಕೆ ಮಾಡಿದ್ದನ್ನು ಸ್ಮರಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು, “ಸಂಬಳ ಏರಿಕೆ ಮತ್ತು 38 ತಿಂಗಳ ಅರಿಯರ್ಸ್, ನಿವೃತ್ತಿ ಸಿಬ್ಬಂದಿಗಳ ಬಾಕಿ ಹಣಗಳನ್ನು ಪಾವತಿಸಿದ್ದೇವೆ. ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ?” ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಕಾಲದಲ್ಲಿ ಸಾರಿಗೆ ಸಂಸ್ಥೆಗಳು ಅಧೋಗತಿಗೆ ತಳ್ಳಲ್ಪಟ್ಟವೆಂದು ಆರೋಪಿಸಿದ
ಅವರು, “ಒಂದೇ ಒಂದು ನೇಮಕಾತಿ ಮಾಡದೆ, ಹೊಸ ಬಸ್ಸುಗಳ ಸೇರ್ಪಡೆ ಮಾಡದೆ, ಸಂಪೂರ್ಣ ಶೂನ್ಯ ಅಭಿವೃದ್ಧಿಯೊಂದಿಗೆ ಸಾರಿಗೆ ಸಂಸ್ಥೆಗಳನ್ನು ನಾಶಮಾಡಲಾಯಿತು. 15 ದಿನಗಳ ಮುಷ್ಕರದಿಂದ ಸಾವಿರಾರು ನೌಕರರು ವಜಾ ಆದರು. ಅವರನ್ನು ನಾವು ಕೆಲಸಕ್ಕೆ ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.
ಬಿಜೆಪಿ ಸರ್ಕಾರದ ಕಾಲದಲ್ಲಿ ಸಾರಿಗೆ ನೌಕರರನ್ನು ಅಮಾನತು ಮಾಡಿ, ಕೋರ್ಟ್ ಕಚೇರಿಗಳಲ್ಲಿ ಅಲೆಯುವಂತೆ ಮಾಡಿದ್ದನ್ನು ಟೀಕಿಸಿದ ಸಚಿವರು ಅವರು, “ಸಾರಿಗೆ ಸಂಸ್ಥೆಗಳಲ್ಲಿ ಅಭಿವೃದ್ಧಿ ಏನು ಎಂಬುದನ್ನು ಎರಡು ವರ್ಷಗಳಲ್ಲಿಯೇ ಮಾಡಿ ತೋರಿಸಿದ್ದೇವೆ. ಬಿಜೆಪಿ ಸರ್ಕಾರದ ದುರಾಡಳಿತದ ಕೊಳೆ ತೊಳೆಯಲು ಐದು ವರ್ಷಗಳು ಕೂಡ ಸಾಲವು” ಎಂದು ಖಂಡಿಸಿದರು.
ಸಾರಿಗೆ ನೌಕರರ ಹಿತ ಕಾಯುವ ಬದ್ಧತೆ ತಮ್ಮದಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಒತ್ತಿ ಹೇಳಿದರು. ಬಿಜೆಪಿ ಸರ್ಕಾರದ ಕಾಲದಲ್ಲಿ ಸಾರಿಗೆ ಸಂಸ್ಥೆಗಳು ಎದುರಿಸಿದ ಸಂಕಟಗಳನ್ನು ಸ್ಮರಿಸಿದ ಅವರು, “ರಾಜ್ಯದ ಜನರು ಬಸ್ಸಿಲ್ಲದೆ ಕಂಗೆಟ್ಟಿದ್ದನ್ನು ಬಿಜೆಪಿ ಮರೆತಿದೆ” ಎಂದು ಕಟು ಟೀಕೆ ಮಾಡಿದರು.
Post Comment