ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಆದೇಶದ ಮೇರೆಗೆ, ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಸಾರಿಗೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗುಜರಾತ್ ರಾಜ್ಯದ ಸಾರಿಗೆ ಕಚೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್‌ನಲ್ಲಿನ ಮಾಹಿತಿಯನ್ನು ಪರಿಶೀಲಿಸಿದ ವೇಳೆ, ಕರ್ನಾಟಕ ರಾಜ್ಯದ ಆರ್‌ಟಿಒ ಕಚೇರಿಗಳಲ್ಲಿ 41 ವಾಹನಗಳಿಗೆ ನಮೂನೆ-38(ಎ) (Fitness Certificate) ನೀಡಲಾಗಿದೆ. ಆದರೆ ಅದೇ ದಿನ ಈ ವಾಹನಗಳು ಗುಜರಾತ್ ರಾಜ್ಯದ ಟೋಲ್ ಪ್ಲಾಜಾಗಳ ಮೂಲಕ ಸಂಚರಿಸಿರುವುದು ಪತ್ತೆಯಾಗಿದೆ. ಈ ಅರ್ಹತಾ ಪತ್ರಗಳನ್ನು ನಿಸಾರ್ ಅಹಮದ್ ಅವರು ಅನುಮೋದಿಸಿದ್ದಾಗಿ ಉಪ ನಿರ್ದೇಶಕರು, ಸಾರಿಗೆ ಆಯುಕ್ತರ ಕಚೇರಿ, ಗಾಂಧಿನಗರ, ಗುಜರಾತ್ ಅವರು ಮಾಹಿತಿ ನೀಡಿದ್ದಾರೆ.
ಈ ವಿಷಯ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಗಮನಕ್ಕೆ ಬಂದ ತಕ್ಷಣವೇ, ಅವರು ಆಯುಕ್ತರು, ಸಾರಿಗೆ ಇಲಾಖೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಅದರಂತೆ ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಂದ ವರದಿ ಪಡೆಯಲಾಯಿತು.
ವರದಿಯಲ್ಲಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಬೆಂಗಳೂರು (ಕೇಂದ್ರ) ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ಅವರು ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ನಮೂನೆ-38(ಎ) ರಲ್ಲಿ ಅರ್ಹತಾ ಪತ್ರ ನವೀಕರಣ ಮಾಡಿರುವುದು ವಾಹನ್ 4.0 ತಂತ್ರಾಂಶದ ಮೂಲಕ ದೃಢಪಟ್ಟಿದೆ. ತಪಾಸಣೆ ನಡೆದ ದಿನವೇ ಈ ವಾಹನಗಳು ಗುಜರಾತ್ ರಾಜ್ಯದ ಟೋಲ್ ಪ್ಲಾಜಾಗಳ ಮೂಲಕ ಸಂಚರಿಸಿರುವುದು ಕೂಡ ದಾಖಲಾಗಿದೆ.
ಇದರಿಂದ ಮೋಟಾರು ವಾಹನಗಳ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ, ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ನಿಸಾರ್ ಅಹಮದ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.



Post Comment