×

ಮಹಿಳೆಯರು ಆರ್ಥಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ -ಮುಖ್ಯಮಂತ್ರಿ ಸಿದ್ದರಾಮಯ್ಯ

*ಸುವರ್ಣಸೌಧಕ್ಕೆ ಬಂದ ಗೃಹಲಕ್ಷ್ಮಿಯರು*

ಬೆಳಗಾವಿ, ಡಿಸೆಂಬರ್ 18: ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಆಗಮಿಸಿದ್ದ ಗೃಹಲಕ್ಷ್ಮಿಯರ ಜೊತೆ ಸಂವಾದ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

*ಮನೆಯಲ್ಲಿ ಕಲಹ ತಂದಿದೆ ಎಂಬ ಬಿಜೆಪಿ ಆರೋಪ ಸುಳ್ಳು*

ಇಂದು ಗೃಹಲಕ್ಷ್ಮಿ ಯೋಜನೆಯ ಹಣದಿಂದ ನಾನಾ ಬದುಕಿನ ಅವಕಾಶಗಳನ್ನು ಸೃಷ್ಟಿಸಿಕೊಂಡ 25 ಕ್ಕೂ ಹೆಚ್ಚು ಮಂದಿ ಫಲಾನುಭವಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದೇನೆ.  ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳ ಜೀವನದಲ್ಲಿ ಆಗಿರುವ ಲಾಭಗಳ ಬಗ್ಗೆ ವಿವರಿಸಿದ್ದಾರೆ. ಬದುಕಿಗೆ ಹೊಸ ಚೈತನ್ಯ ನೀಡಿದ ಗೃಹಲಕ್ಷ್ಮಿ  ಯೋಜನೆಯನ್ನು ಸಾಕಾರಗೊಳಿಸಿದ ಮುಖ್ಯಮಂತ್ರಿಗಳು, ಇಲಾಖೆಯ ಸಚಿವರು ಹಾಗೂ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಗೃಹಲಕ್ಷ್ಮಿಯರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಿಂದ ಒಂದೇ ಮನೆಯ ಅತ್ತೆ ಸೊಸೆಯ ಮಧ್ಯೆ ಜಗಳ ತಂದಿದೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ ಇಂದಿನ ಕಾರ್ಯಕ್ರಮಕ್ಕೆ ಅತ್ತೆಸೊಸೆಯರೇ ಜೊತೆ ಜೊತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯೋಜನೆಯಿಂದ ತಮಗಾಗಿರುವ ಲಾಭದ ಬಗ್ಗೆ ಮಾತನಾಡಿದ್ದಾರೆ.

ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಸಂತೋಷದ ವಿಚಾರ. ಆದ್ದರಿಂದ ಮಹಿಳೆಯರನ್ನು ಸಶಕ್ತಗೊಳಿಸುವ ಈ ಯೋಜನೆಯನ್ನು ಮುಂದುವರಿಸಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾದ ಕಾರಣದ ಬಗ್ಗೆ ಮಾಧ್ಯಮದವರಿಗೆ ಉತ್ತರಿಸಿ, ಬೆಂಗಳೂರು ನಗರದ ರಸ್ತೆಗಳ ಅಭಿವೃದ್ಧಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ ಎಂದರು.

*ಬಿಜೆಪಿಯವರು ಸಂವಿಧಾನ ವಿರೋಧಿಗಳು*

*ಎಐಸಿಸಿ ಅಧಿವೇಶನಕ್ಕೆ ಅಡ್ಡಿಪಡಿಸಿದರೆ ಕಾನೂನಿನ ರೀತಿ ಕ್ರಮ*

ಎಐಸಿಸಿ ಅಧಿವೇಶನದ ದಿನವೇ , ಬಿಜೆಪಿಯವರು ವಕ್ಫ್ ಹೋರಾಟ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮಹಾತ್ಮಾಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸದೇ ಹೋಗಿದ್ದರೆ, ಎಲ್ಲರೂ ಸ್ವತಂತ್ರವಾಗಿರಲು ಸಾಧ್ಯವಾಗುತ್ತಿತ್ತೇ? ಸಂವಿಧಾನ ರಚನೆಯಾದ ನಂತರವೇ ಇಂತಹ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗಿರುವುದು.

ಗೋಲ್ವಾಲ್ಕರ್, ಹೆಡಗೆ, ಸಾವರ್ಕರ್ ಯವರು ಸೇರಿದಂತೆ ಬಿಜೆಪಿಯವರು ಸಂವಿಧಾನ ವಿರೋಧಿಗಳು. ಭಾರತೀಯತೆಯಲ್ಲಿ ನಂಬಿಕೆಯಿರಿಸದಿರುವ ಇವರು ಮನುಸ್ಮೃತಿಗೆ  ಒತ್ತು ನೀಡುವವರಾಗಿದ್ದಾರೆ.  ನಮ್ಮ ಮಹಾತ್ಮಾಗಾಂಧಿ ಆಧರಿಸಿದ ಎಐಸಿಸಿ ಅಧಿವೇಶನವನ್ನು ಅಡ್ಡಿಪಡಿಸಿದರೆ ಕಾನೂನಿನ ರೀತಿ ಕ್ರಮಕೈಗೊಳ್ಳಲಾಗುವುದು ಎಂದರು.

*ರಾಜಕಾರಣಕ್ಕಾಗಿ ಅಧಿವೇಶನವನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ*

ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯವರು ಪದೇ ಪದೇ ಹೋರಾಟ ಮಾಡಿ ಅಡ್ಡಿಪಡಿಸುತ್ತಿರುವ ಬಗ್ಗೆ ಉತ್ತರಿಸಿ, ವಿರೋಧಪಕ್ಷವಾಗಿ ಬಿಜೆಪಿಯವರು ರಾಜ್ಯದ ಅಭಿವೃದ್ಧಿ ಬಗ್ಗೆ , ಸರ್ಕಾರದ ತಪ್ಪು ಒಪ್ಪುಗಳ ಬಗ್ಗೆ ಮಾತನಾಡಬೇಕು. ಆದರೆ ಅದನ್ನು ಹೊರತುಪಡಿಸಿ , ರಾಜಕೀಯ ಕಾರಣಗಳಿಗಾಗಿ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

*ಸಿಬಿಐಗೆ ವಹಿಸಿ ಎಂದು ಹೇಳಲು ಬಿಜೆಪಿಗೆ ನೈತಿಕತೆ ಇಲ್ಲ*

150 ಕೋಟಿ ಆಫರ್ ಹಾಗೂ ವಕ್ಫ್ ಪ್ರಕರಣಗಳನ್ನು ಸಿಬಿಐಗೆ ನೀಡಲಿ ಎಂದು ಬಿಜೆಪಿಯ ವಿಜಯೇಂದ್ರ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 2008 ರಿಂದ 2013ರವರೆಗೆ ಹಾಗೂ 2018 ರಿಂದ 2023ರವರೆಗೆ ಬಿಜೆಪಿಯವರು ಯಾವುದಾದರೂ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆಯೇ? ಅವರಿಗೆ ಈ ರೀತಿ ಹೇಳಲು ಯಾವುದೇ ನೈತಿಕತೆ ಇಲ್ಲ ಎಂದರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed