ಮಂಗಳೂರು: ಬಳ್ಳಾಲ್ ಬಾಗ್ ಶ್ರೀ ಸತ್ಯಸಾರಮಾಣಿ ದೈವಸ್ಥಾನ ಸಮಿತಿ (ರಿ.) ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಮಂಗಳವಾರ ನಗರದ ಬಳ್ಳಾಲ್ ಬಾಗ್ ವಿವೇಕನಗರದ ಶ್ರೀ ಕಾನದ-ಕಟದ ಸಭಾಂಗಣದಲ್ಲಿ ನಡೆಯಿತು.

ಲೈಫ್ ಸೇವ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಅರ್ಜುನ್ ಭಂಡಾರ್ಕರ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ರವರು ನ್ಯಾಯ ಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕರಾಗಿದ್ದ ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆನ್ನುವ ಅಪೇಕ್ಷೆ ಮೇರೆಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅನೇಕ ಅನುಕೂಲತೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ದಿನೇಶ್ ಮುಳೂರು ಮಾತನಾಡಿ, ಅಂಬೇಡ್ಕರ್ ಅವರ ಕುಟುಂಬದ ಇಚ್ಛೆಯಂತೆ ಅಂಬೇಡ್ಕರ್ ತವರೂರಾದ ಮುಂಬಯಿಯ ದಾದರ್ ನಲ್ಲಿಯೇ ಅಂತ್ಯಸಂಸ್ಕಾರ ನಡೆದಿದೆ. ಅಂಬೇಡ್ಕರ್ ಅವರು ನೆಹರೂ ಸಂಪುಟದಲ್ಲಿ ಕಾನೂನು ಮಂತ್ರಿಯಾಗಿದ್ದರು. ದೇಶದ ಮಹಿಳೆಯರಿಗೆ ಶಿಕ್ಷಣ, ಉದ್ಯೋಗದಲ್ಲಿ ಪುರುಷರಂತೆ ಸಮಾನತೆ ಹಕ್ಕು ನೀಡಬೇಕೆಂದು ಪ್ರತಿಪಾದಿಸಿದ್ದರು. ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಭಾತೃತ್ವವನ್ನು ಯಾರು ವಿರೋಧಿಸುತ್ತಾರೋ ಅವರೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಗೊಂಡಿರುವ ಸಂವಿಧಾನವನ್ನೂ ವಿರೋಧಿಸುವವರಾಗಿದ್ದಾರೆ ಎಂದು ಹೇಳಿದರು.
ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಫಲವಾಗಿ ಇಂದು ದೇಶದ ಕೋಟ್ಯಾಂತರ ಜನರು ನಿಟ್ಟುಸಿರು ಬಿಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರೇಮ್ ನಾಥ್ ಪಿ.ಬಿ ನೇತೃತ್ವದ ಬೊಲ್ಪು ಸಮಾಜ ಸೇವಾ ಟ್ರಸ್ಟ್ ಇದರ ಲೋಗೋವನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಬಿ. ಸಾಲ್ಯಾನ್ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾರಮಾಣಿ ದೈವಸ್ಥಾನ ಸಮಿತಿ ಅಧ್ಯಕ್ಷ ರಾಜೇಶ್ ಮುಚ್ಚೂರು ಅಧ್ಯಕ್ಷತೆ ವಹಿಸಿದ್ದರು. ಶಿವರಾಜ್ ಪಿ.ಬಿ, ತನಿಯಪ್ಪ ಪಡ್ಡಾಯೂರು, ಸುನೀಲ್ ಕುಮಾರ್, ಎಂ.ಸಂಜೀವ, ಸುಜಾತ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಡಿ.ವಿ ಅಲಂಗಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸದರು. ಪ್ರೇಮ್ ನಾಥ್ ಪಿ.ಬಿ ವಂದಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



Post Comment