ಬೆಂಗಳೂರು:
ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥೈರ್ಯವನ್ನು ಬಲಪಡಿಸಲು ರಾಜ್ಯ ಸರ್ಕಾರವು ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ (PTFRC) ಯನ್ನು ರಚಿಸಿರುವುದಾಗಿ ಅಧಿಸೂಚನೆ ಹೊರಡಿಸಿದೆ.
ಈ ಮೊದಲು ರಾಜಕೀಯ ಇಚ್ಛಾಶಕ್ತಿಗಳ ಆಧಾರದ ಮೇಲೆ ಮಾತ್ರ ಪ್ರಯಾಣ ದರ ಹೆಚ್ಚಳವಾಗುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ದರ ಪರಿಷ್ಕರಣೆ ನಡೆಸಲು ಯಾವುದೇ ಸಮಿತಿಗಳು ಇರಲಿಲ್ಲ. ಇಂಧನದ ಬೆಲೆ ಹಾಗೂ ಸಿಬಂದಿ ವೆಚ್ಚ ದಿನೇದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಯೋಚಿತ ದರ ಪರಿಷ್ಕರಣೆ ಅಗತ್ಯವಾಗಿದೆ. ಇಲ್ಲವಾದಲ್ಲಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಇದೆ.
2014ರಲ್ಲಿ ಬಿ.ಎಂ.ಟಿ.ಸಿ ದರ ಹೆಚ್ಚಳ ನಡೆದಿದ್ದರೆ, ಇತರೆ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಮಾತ್ರ ಪರಿಷ್ಕರಣೆ ಜರುಗಿತ್ತು. 2014ರಲ್ಲಿ ಪ್ರತಿ ದಿನದ ಡೀಸೆಲ್ ವೆಚ್ಚ ರೂ.7 ಕೋಟಿ ಇದ್ದರೆ, ಅದು 2025ಕ್ಕೆ ರೂ.13 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸಿಬಂದಿ ವೆಚ್ಚವು ರೂ.6 ಕೋಟಿಯಿಂದ ರೂ.12 ಕೋಟಿಗೆ ಏರಿಕೆಯಾಗಿದೆ. ಅಂದರೆ ವೆಚ್ಚಗಳಲ್ಲಿ ಶೇಕಡಾ 100ರಷ್ಟು ಏರಿಕೆ ಕಂಡಿದೆ.
ಪ್ರಯಾಣಿಕರ ಮೇಲೆ ಒಂದೇ ಬಾರಿಯಲ್ಲಿ ಹೆಚ್ಚಿನ ದರ ಏರಿಕೆಯ ಹೊರೆ ಬೀಳದಂತೆ, ಕಾಲಕಾಲಕ್ಕೆ ಸ್ವಲ್ಪ ಪ್ರಮಾಣದಲ್ಲಿ ವೈಜ್ಞಾನಿಕ ದರ ಪರಿಷ್ಕರಣೆ ಮಾಡುವುದೇ ಸೂಕ್ತ ಎಂದು ಸರ್ಕಾರ ತಿಳಿಸಿದೆ.
ಸಮಿತಿಯ ರೂಪರೇಷೆ
ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರಡಿ ರಚನೆಯಾದ ಈ ಸಮಿತಿಯಲ್ಲಿ –
ಅಧ್ಯಕ್ಷರಾಗಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಇರಲಿದ್ದಾರೆ.
ಇಬ್ಬರು ಸದಸ್ಯರಲ್ಲಿ ಒಬ್ಬರು ಕಾನೂನು ಅರ್ಹತೆಯ ನಿವೃತ್ತ ಕಾರ್ಯದರ್ಶಿ, ಇನ್ನೊಬ್ಬರು ಕೈಗಾರಿಕಾ ಅಥವಾ ಹಣಕಾಸು ತಜ್ಞರಾಗಿರಲಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರು (KSRTC) ಸದಸ್ಯ-ಕಾರ್ಯದರ್ಶಿಗಳಾಗಿರುತ್ತಾರೆ.
ಸಮಿತಿಯ ಕಾರ್ಯಗಳು
1. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ ಮಾಡಿ ದರ ಪರಿಷ್ಕರಣೆ ಶಿಫಾರಸು ಮಾಡುವುದು.
2. ಹಣಕಾಸು ಸುಧಾರಣೆಗಾಗಿ ಸರ್‌ಚಾರ್ಜ್ ಹಾಗೂ ಇತರೆ ಶುಲ್ಕ ವಿಧಿಸಲು ಸೂಚನೆ ನೀಡುವುದು.
3. ಶಿಫಾರಸುಗಳ ಪ್ರತಿಯನ್ನು ಪ್ರತಿ ವರ್ಷ ಏಪ್ರಿಲ್ 1ರಿಂದ ಡಿಸೆಂಬರ್ 31ರೊಳಗೆ ಸರ್ಕಾರಕ್ಕೆ ಸಲ್ಲಿಸಿ, ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವುದು.
ರಾಜ್ಯ ಸರ್ಕಾರವು PTFRC ರಚಿಸುವ ಮೂಲಕ ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಮಹತ್ವದ ಹೆಜ್ಜೆಯಿಟ್ಟಿದೆ.




Post Comment