Golden Book of World Records ನಲ್ಲಿ ಸ್ಥಾನ ಪಡೆದ ಶಕ್ತಿ ಯೋಜನೆ
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳಾ ಸಬಲೀಕರಣ ಯೋಜನೆ ಶಕ್ತಿ ಇದೀಗ ವಿಶ್ವದಾಖಲೆ ಬರೆದಿದೆ. ಜೂನ್ 11, 2023 ರಿಂದ ಜುಲೈ 25, 2025ರವರೆಗೆ 500 ಕೋಟಿ ಮಹಿಳೆಯರು ಉಚಿತ ಬಸ್ ಸೇವೆಯನ್ನು ಬಳಸಿಕೊಂಡಿರುವುದರಿಂದ Golden Book of World Records ನಲ್ಲಿ ಶಕ್ತಿ ಯೋಜನೆ ದಾಖಲೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ದೃಢ ದೃಷ್ಟಿಯಿಂದ ಜಾರಿಗೊಂಡ ಈ ಯೋಜನೆ, ಮಹಿಳೆಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗಾವಕಾಶಗಳಲ್ಲಿ ಸಬಲೀಕರಣಕ್ಕೆ ಪ್ರಮುಖ ಪಾತ್ರವಹಿಸಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, “ಇದು ಸಾರಿಗೆ ನಿಗಮಗಳ ಸಿಬ್ಬಂದಿ, ಅಧಿಕಾರಿಗಳ ಪರಿಶ್ರಮದ ಫಲ. ಶಕ್ತಿ ಯೋಜನೆಯಿಂದ ಮಹಿಳೆಯರ ಉದ್ಯೋಗಾವಕಾಶ ಹೆಚ್ಚಿ, ರಾಜ್ಯದ ತಲಾ ಆದಾಯ ವೃದ್ಧಿಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಎರಡು ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 5800 ಹೊಸ ಬಸ್ಸುಗಳು, 10,000 ಹೊಸ ನೇಮಕಾತಿ, ಹಾಗೂ 2000 ಕೋಟಿ ರೂ. ಸಾಲ ಪರಿಹಾರ ಒದಗಿಸಲಾಗಿದೆ. ಇದೇ ವೇಳೆ, ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ.
ಸಮೀಕ್ಷೆಗಳ ಪ್ರಕಾರ, ಬೆಂಗಳೂರಿನಲ್ಲಿ 23% ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆ ಶಕ್ತಿ ಯೋಜನೆಯಿಂದ ಹೆಚ್ಚಳ ಕಂಡಿದೆ.
ದೇಶದ ಅನೇಕ ರಾಜ್ಯಗಳು ಈ ಯೋಜನೆಯನ್ನು ಮಾದರಿಯಾಗಿ ಅಳವಡಿಸಿಕೊಳ್ಳುತ್ತಿರುವುದೇ ಕರ್ನಾಟಕದ ಶಕ್ತಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.



Post Comment