ನಿಯಮ ಬಾಹಿರ ಚಟುವಟಿಕೆಗಳಿಗೆ ಮನ್ನಣೆ ನೀಡಲ್ಲ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಎಚ್ಚರಿಕೆ
ಸಕಲೇಶಪುರ, ಜುಲೈ 11: ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬವನ್ನು ಸರಕಾರಿ ಸಮಯದಲ್ಲಿ ಹಾಗೂ ಕಚೇರಿ ಆವರಣದಲ್ಲೇ ಆಚರಿಸಿದ್ದು, ಇದರ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಸಂಬಂಧ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯವರ ಗಮನಕ್ಕೆ ವಿಷಯ ಬಂದ ಬೆನ್ನಲ್ಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿತ್ತು.
ಆದೇಶದಂತೆ ನಡೆದ ತನಿಖೆಯ ಬಳಿಕ, ಕಚೇರಿ ವೇಳೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿದ್ದು ಮಾತ್ರವಲ್ಲದೇ, ಅಧಿಕಾರಿಗಳು ಖುದ್ದಾಗಿ ಶಾಲು ಹೊದಿಸಿ ಶುಭ ಹಾರೈಸಿದ ದೃಶ್ಯಗಳು ದೃಢಪಟ್ಟ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಮಾನತುಗೊಂಡವರು:
ಎಸ್.ಎನ್. ಮಧುರ – ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆಡಳಿತ)
ಎಂ.ಕೆ. ಗಿರೀಶ್ – ಅಧೀಕ್ಷಕರು
ಎನ್.ಆರ್. ಆಶಾ – ಮೋಟಾರು ವಾಹನ ನಿರೀಕ್ಷಕರು
ಈ ಪ್ರಕರಣದಲ್ಲಿ ಪ್ರಥಮ ದೃಷ್ಟಿಯಿಂದ ಶಿಸ್ತು ಲಂಗನೆಯಾಗಿರುವುದು ಕಂಡುಬಂದಿದ್ದು, ಸರಕಾರಿ ಅಧಿಕಾರಿಗಳಿಂದ ಇಂತಹ ಕಾನೂನು ಬಾಹಿರ ನಡೆ ಅಸ್ವೀಕಾರ್ಯ ಎಂದು ಸಾರಿಗೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಸಾರಿಗೆ ಸಚಿವರು ಕಟ್ಟುನಿಟ್ಟಾದ ಸಂದೇಶ ರವಾನಿಸಿದ್ದು, ಯಾವುದೇ ಸರಕಾರಿ ಕಚೇರಿಗಳಲ್ಲಿ ನಿಯಮ ಬಾಹಿರ ಚಟುವಟಿಕೆಗಳನ್ನು ಮನ್ನಣೆ ನೀಡಲಾಗುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
Post Comment