ಧಾರವಾಡ, ಜೂನ್ 25, 2025:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.)ಯಲ್ಲಿ ಹೊಸದಾಗಿ ಆಯ್ಕೆಯಾದ 46 ಚಾಲಕರಿಗೆ ನೇಮಕಾತಿ ಪತ್ರಗಳನ್ನು ಬುಧವಾರ ಸಂಸ್ಥೆಯ ಸಭಾಂಗಣದಲ್ಲಿ ವಿತರಿಸಲಾಯಿತು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ವಾಣಿಜ್ಯ ಮಳಿಗೆಗಳ ಪರವಾನಗಿ ನಿರ್ವಹಣೆಗಾಗಿ ಹೊಸ ತಂತ್ರಾಂಶವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಯಿತು. ಮಾತನಾಡಿದ ಸಚಿವರು, “2019ರಲ್ಲಿ ಪ್ರಾರಂಭವಾದ ಚಾಲಕ ನೇಮಕಾತಿ ಪ್ರಕ್ರಿಯೆ ಕೋವಿಡ್ ಸಮಸ್ಯೆಗಳಿಂದ ಸ್ಥಗಿತಗೊಂಡಿತು. ಆದರೆ, ಹೊಸ ಸರ್ಕಾರದ ನೇತೃತ್ವದಲ್ಲಿ 1,000 ಚಾಲಕ ಮತ್ತು ನಿರ್ವಾಹಕರ ನೇಮಕಾತಿಯನ್ನು ಪಾರದರ್ಶಕವಾಗಿ ಪೂರ್ಣಗೊಳಿಸಲಾಗಿದೆ” ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಭರಮಗೌಡ ಕಾಗೆ ಅವರು “ಇನ್ನೂ ಸಿಬ್ಬಂದಿ ಕೊರತೆ ಇದ್ದು, ಘಟಕಗಳ ಸುಧಾರಣೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬೇಕು” ಎಂದು ಮನವಿ ಮಾಡಿದರು. ವ್ಯವಸ್ಥಾಪಕ ನಿರ್ದೇಶಕ ಪ್ರಿಯಾಂಗಾ ಎಂ. ಭಾಆಸೇ ಅವರು ಕಾರ್ಯಕ್ರಮದ ವಿವರಗಳನ್ನು ಮಂಡಿಸಿದರು.
ಸಚಿವ ರಾಮಲಿಂಗಾರೆಡ್ಡಿ ಅವರ ಕಳಕಳಿ: ನೇಮಕಾತಿ ಅರ್ಜಿದಾರರಿಗೆ ವಯೋಮಿತಿ ಸಡಿಲಿಕೆ ಪ್ರಸ್ತಾವನೆ
ಸರಕಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.)ಯಲ್ಲಿ 2,000 ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ 2023ರಲ್ಲಿ ಅನುಮತಿ ನೀಡಿದ್ದರೂ, 1,000 ಚಾಲಕರ ನೇಮಕಾತಿ ಮಾತ್ರ ಪೂರ್ಣಗೊಂಡಿದೆ. ಈಗ ಉಳಿದ 1,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ತಯಾರಿ ನಡೆಸಲಾಗುತ್ತಿದೆ.
ಹೊಸ ನೇಮಕಾತಿಗಾಗಿ ಈಗಾಗಲೇ 57,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಅನ್ಯಾಯವಾಗದಂತೆ, ವಯೋಮಿತಿ ಸಡಿಲಿಸುವಂತೆ ಡಿಪಿಎಆರ್ ಮತ್ತು ಕಾನೂನು ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರು, ನಿರ್ದೇಶಕರು, ಹಿರಿಯ ಅಧಿಕಾರಿಗಳು ಮತ್ತು ಡ್ರೀಮ್ ಸ್ಟೆಪ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ್ ಅವರು ಸ್ವಾಗತಿಸಿದರೆ, ಸುನೀಲ್ ಪತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
Post Comment