ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಾರಿಗೆ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಅವರ ಟ್ವೀಟ್‌ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತೀವ್ರ ಕೌಂಟರ್ ನೀಡಿದ್ದಾರೆ.
ಸಾರಿಗೆ ಸಂಸ್ಥೆಗಳು ತಮ್ಮ ಅವಧಿಯಲ್ಲಿ ಉತ್ತುಂಗದಲ್ಲಿ ಇವೆ ಎಂದು ಹೇಳಿಕೊಳ್ಳುತ್ತಿರುವ ಅಶೋಕ್ ಅವರು “ಭ್ರಮೆಯಿಂದ ಹೊರಬರಬೇಕು” ಎಂದು ರಾಮಲಿಂಗ ರೆಡ್ಡಿ ಅವರು ಟೀಕಿಸಿದ್ದಾರೆ.
ಮುಷ್ಕರಗಳ ಇತಿಹಾಸ ಉಲ್ಲೇಖ ತಾವು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲೇ (2012ರಲ್ಲಿ) ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮುಷ್ಕರಗಳಿಗೆ ಅಡಿಪಾಯ ಹಾಕಲಾಗಿದೆ ಎಂದು ಆರೋಪಿಸಿದ ಸಚಿವರು, ಬಿಜೆಪಿ ಆಡಳಿತ ಅವಧಿಯಲ್ಲಿ 2020 ಮತ್ತು 2021ರಲ್ಲಿ ಎರಡು ಪ್ರಮುಖ ಮುಷ್ಕರಗಳು ನಡೆದಿದ್ದು, ವಿಶೇಷವಾಗಿ 15 ದಿನಗಳ ದೀರ್ಘ ಮುಷ್ಕರಕ್ಕೂ ಅಶೋಕ್ ಹೊಣೆ ಎಂದು ಹೇಳಿದರು. ಈ ವೇಳೆ ಸಾವಿರಾರು ನೌಕರರನ್ನು ವಜಾ, ಅಮಾನತು ಮಾಡಲಾಗಿದ್ದು, ಅವರ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಉಲ್ಲೇಖಿಸಿದರು.
ವೇತನ ಪರಿಷ್ಕರಣೆ ಮತ್ತು ಬಾಕಿ ಸಮಸ್ಯೆ ಮಾರ್ಚ್ 2023ರಲ್ಲಿ ವೇತನ ಪರಿಷ್ಕರಣೆ ಮಾಡಿದರೂ 38 ತಿಂಗಳ ಹಿಂಬಾಕಿ ವೇತನಕ್ಕೆ ಅನುದಾನ ನೀಡದೆ ತಪ್ಪಾದ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ಆರೋಪಿಸಿದರು. ನಿವೃತ್ತ ನೌಕರರ ರೂ.224 ಕೋಟಿ ಬಾಕಿಯನ್ನು ಸಹ ಬಿಜೆಪಿ ಸರ್ಕಾರ ಮೀಸಲಿಡದೆ ಬಿಟ್ಟಿದ್ದರೆ, ತಮ್ಮ ಸರ್ಕಾರವು 2025ರಲ್ಲಿ ಬಿಡುಗಡೆ ಮಾಡಿದೆ ಎಂದರು.
ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ 2026ರ ಮಾರ್ಚ್ ಅಂತ್ಯದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ಒಟ್ಟು ಬಾಕಿ ಹೊಣೆಗಾರಿಕೆ ರೂ.7130.80 ಕೋಟಿ ಇದ್ದು, ಇದರಲ್ಲಿ ನೌಕರರ ಭವಿಷ್ಯ ನಿಧಿ ಮತ್ತು ಇಂಧನ ಪಾವತಿ ಬಾಕಿಗಳೂ ಸೇರಿವೆ ಎಂದು ವಿವರಿಸಿದರು. ಬಿಜೆಪಿ ಅವಧಿಯ ಬಾಕಿಗಳನ್ನು ತೆರವುಗೊಳಿಸಲು 2025ರಲ್ಲಿ ರೂ.2000 ಕೋಟಿ ಸಾಲ ಪಡೆಯಲು ಅನುಮತಿ ನೀಡಿದ್ದು, ಅದರ ಬಡ್ಡಿ-ಅಸಲು ಪಾವತಿಯನ್ನು ಸರ್ಕಾರವೇ ಮಾಡುತ್ತಿದೆ ಎಂದರು.
ವೆಚ್ಚ ಮತ್ತು ವೇತನ ಹೆಚ್ಚಳದ ಸವಾಲು ಸಾರಿಗೆ ಸಂಸ್ಥೆಗಳ ಆದಾಯದಲ್ಲಿ ಸುಮಾರು 49.15% ಸಿಬ್ಬಂದಿ ವೆಚ್ಚ ಮತ್ತು 34.49% ಡೀಸೆಲ್ ವೆಚ್ಚವಾಗುತ್ತಿದೆ. ಕಾರ್ಮಿಕ ಸಂಘಟನೆಗಳ ಬೇಡಿಕೆಯಂತೆ 25% ವೇತನ ಹೆಚ್ಚಳ ಮಾಡಿದರೆ, ವರ್ಷಕ್ಕೆ ರೂ.1578 ಕೋಟಿ ಹಾಗೂ ನಾಲ್ಕು ವರ್ಷಗಳಿಗೆ ರೂ.6312 ಕೋಟಿ ಹೆಚ್ಚುವರಿ ಭಾರ ಬೀಳಲಿದೆ ಎಂದು ರಾಮಲಿಂಗ ರೆಡ್ಡಿ ಅವರು ಸ್ಪಷ್ಟಪಡಿಸಿದರು.
ಮುಂದಿನ ನಿರ್ಧಾರ ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿ ವಿಷಯವನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರದಲ್ಲೇ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿದ ಅವರು, ಮುಷ್ಕರಕ್ಕೆ ಮುಂದಾದರೆ ಅದರ ಹೊಣೆ ಕಾರ್ಮಿಕ ಸಂಘಟನೆಗಳದ್ದೇ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.



Post Comment