×

ಬೇಸಿಗೆ ತಾಪಕ್ಕೆ ಎಚ್ಚರಿಕೆ: ಚಾಲಕರು–ನಿರ್ವಾಹಕರಿಗೆ ಕೆಎಸ್‌ಆರ್‌ಟಿಸಿ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ತಾಪಮಾನ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ಚಾಲಕರು ಮತ್ತು ನಿರ್ವಾಹಕರಿಗೆ ವಿಶೇಷ ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಿದೆ.

ನಿಗಮದ ಪ್ರಕಾರ, ಚಾಲನಾ ಸಿಬ್ಬಂದಿಯ ಕೆಲಸ ಸ್ವಭಾವತಃ ಶ್ರಮದಾಯಕವಾಗಿದ್ದು, ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದೆ. ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ಕರ್ತವ್ಯದ ಅವಧಿಗೆ ಸಾಕಾಗುವಷ್ಟು ಶುದ್ಧ ಕುಡಿಯುವ ನೀರನ್ನು ಜೊತೆಯಲ್ಲಿ ಕೊಂಡೊಯ್ಯಬೇಕು ಹಾಗೂ ದಿನಪೂರ್ತಿ ಹೆಚ್ಚು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು ಎಂದು ಸೂಚಿಸಲಾಗಿದೆ.

ಆಹಾರದಲ್ಲಿ ತೇವಾಂಶ ಹೆಚ್ಚಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವಂತೆ ಸಲಹೆ ನೀಡಲಾಗಿದೆ. ವಿಶೇಷವಾಗಿ ಎಳನೀರು, ಮಜ್ಜಿಗೆ, ಕಲ್ಲಂಗಡಿ, ಕರಬೂಜ, ಕ್ಯಾರೆಟ್, ಸೌತೆಕಾಯಿ, ಬೆಂಡೆಕಾಯಿ ಮತ್ತು ಪುದೀನ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇದೇ ವೇಳೆ ದೇಹವನ್ನು ನಿರ್ಜಲೀಕರಣಗೊಳಿಸುವ ತಂಬಾಕು, ಧೂಮಪಾನ, ಮದ್ಯಪಾನ, ಚಹಾ, ಕಾಫಿ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ತಪ್ಪಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಬಿಸಿಲಿನಲ್ಲಿ ನಿಂತಿರುವ ವಾಹನಗಳಲ್ಲಿ ಹೆಚ್ಚು ಹೊತ್ತು ಕೂರುವುದು ತಪ್ಪಿಸುವುದು ಅಗತ್ಯ ಎಂದು ತಿಳಿಸಲಾಗಿದೆ.

ಪ್ರಥಮ ಚಿಕಿತ್ಸೆ ಕ್ರಮವಾಗಿ, ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ತಕ್ಷಣ ನೆರಳಿನಲ್ಲಿರುವ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಿ, ಕುಡಿಯಲು ನೀರು ಅಥವಾ ORS ನೀಡಬೇಕು. ದಿನಕ್ಕೆ 4–5 ಬಾರಿ ತಣ್ಣೀರು ಬಳಸಿ ಮುಖ ತೊಳೆಯುವುದು ಹಾಗೂ ತುರ್ತು ಪರಿಸ್ಥಿತಿಗಾಗಿ ORS ಪೌಡರ್ ಮತ್ತು ಅಗತ್ಯ ಔಷಧಿಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.

ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಮೂರ್ಛೆ ಅಥವಾ ಅನಾರೋಗ್ಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕೆಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed