ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಮರುಪ್ರಾರಂಭಿಸುವುದರ ಜೊತೆಗೆ ವಿದ್ಯಾರ್ಥಿಗಳಿಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಮಹತ್ವದ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಎನ್.ಎಸ್.ಯು.ಐ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
ಸೋಮವಾರ ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಎನ್.ಎಸ್.ಯು.ಐ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಸಹಿತಿಂಡಿ ಹಂಚಿ ಬಜೆಟ್ ಘೋಷಣೆಯನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್.ಯು.ಐ ರಾಷ್ಟ್ರೀಯ ಸಂಯೋಜಕ ಹಾಗೂ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ, ವಿದ್ಯಾರ್ಥಿ ಸಂಘಗಳ ಚುನಾವಣೆ ಮರುಪ್ರಾರಂಭವು ವಿದ್ಯಾರ್ಥಿ ಸಮುದಾಯದ ನಾಯಕತ್ವ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಜೊತೆಗೆ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಆರಂಭಿಸುವುದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ್ ಬಶೀರ್, ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಕ್ಷ ಸಫ್ವಾನ್ ಕುದ್ರೋಳಿ, ಜಿಲ್ಲಾ ಉಪಾಧ್ಯಕ್ಷ ಸುಖ್ವಿಂದರ್ ಸಿಂಗ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್, ಉಪಾಧ್ಯಕ್ಷ ಇಶಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Post Comment