ಬೆಂಗಳೂರು, ಜೂನ್ 17:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) ಎಂಟು ವರ್ಷಗಳ ನಂತರ ನಡೆದ ಮಹತ್ವಪೂರ್ಣ ನೇಮಕಾತಿಯಲ್ಲಿ ಇಂದು 2000 ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಅಭ್ಯರ್ಥಿಗಳಿಗೆ ನಿಯೋಜನಾ ಆದೇಶ ವಿತರಣೆ ಮಾಡಲಾಯಿತು. ಬೆಂಗಳೂರಿನ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ (ವಾಸು) ಮತ್ತು ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಅವರು ಸಾಂಕೇತಿಕವಾಗಿ 51 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದರು.

ಪಾರದರ್ಶಕ ನೇಮಕಾತಿ ಪ್ರಕ್ರಿಯೆ
ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇಮಕಾತಿಗೆ 2020 ರಲ್ಲಿ ಅಧಿಸೂಚನೆ ಹೊರಡಿಸಲಾಯಿತು. ಆದರೆ ಕೋವಿಡ್-19 ಪಾಂಡಮಿಕ್ನಿಂದಾಗಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ ದಿನಾಂಕ 13-10-2023 ರಂದು ಕರ್ನಾಟಕ ಸರ್ಕಾರ 2000 ಚಾಲಕ-ಕಂ-ನಿರ್ವಾಹಕ ಹಾಗೂ 300 ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿತು. ತಾಂತ್ರಿಕ ಸಹಾಯಕರ ನೇಮಕಾತಿ ಜನವರಿ 2024 ರಲ್ಲಿ ಪೂರ್ಣಗೊಂಡಿತು.
ಈ ಹುದ್ದೆಗಳಿಗೆ ಒಟ್ಟು 25,494 ಅರ್ಜಿಗಳು ಬಂದಿದ್ದು, ದಾಖಲೆ ಪರಿಶೀಲನೆ ನಂತರ 13,954 ಅಭ್ಯರ್ಥಿಗಳು ಚಾಲನಾ ವೃತ್ತಿಪರ ಪರೀಕ್ಷೆಗೆ ಅರ್ಹರಾಗಿದ್ದರು. ಹಾಸನ ಮತ್ತು ಹುಮ್ನಾಬಾದ್ ತರಬೇತಿ ಕೇಂದ್ರಗಳಲ್ಲಿ ಈ ಪರೀಕ್ಷೆಗಳನ್ನು ಗಣಕೀಕೃತ ವಿಧಾನದಲ್ಲಿ ನಡಿಸಲಾಯಿತು. 2672 ಅಭ್ಯರ್ಥಿಗಳು ಹುಮ್ನಾಬಾದ್ ಮತ್ತು 11,282 ಮಂದಿ ಹಾಸನದಲ್ಲಿ ಪರೀಕ್ಷೆ ನೀಡಿದ್ದಾರೆ. ವಿಶೇಷವಾಗಿ ಈ ಬಾರಿ ಚಾಲನಾ ಪರೀಕ್ಷೆಗೆ ಆಕ್ಷೇಪಣೆ ಆಹ್ವಾನಿಸಲು ಅವಕಾಶವಿತ್ತು.

ಅರ್ಹರಾದ ಅಭ್ಯರ್ಥಿಗಳಲ್ಲಿ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ 2000 ಮಂದಿಗೆ ದಿನಾಂಕ 05-06-2025 ರಂದು ಸಂಭವನೀಯ ಆಯ್ಕೆಪಟ್ಟಿ ಪ್ರಕಟಿಸಲಾಯಿತು. ನಂತರ 12-06-2025 ರಂದು ಅಂತಿಮ ಆಯ್ಕೆಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು.
ದಿನಾಂಕ 16 ರಿಂದ 19 ಜೂನ್ 2025 ರವರೆಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ವಿಭಾಗ ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ 05-07-2025 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. 50/50 ಅಂಕಗಳಿರುವ ಅಭ್ಯರ್ಥಿಗಳಿಗೆ ದಿನಾಂಕ 17-06-2025 ರಂದು ನಿಯೋಜನಾ ಆದೇಶ ನೀಡಲಾಯಿತು.

ಅನುಕಂಪದ ನೇಮಕಾತಿ
ಹಲವಾರು ನೌಕರರು ಸೇವೆಯಲ್ಲಿ ನಿಧನ ಹೊಂದಿರುವುದರಿಂದ, ನಿಗಮವು ಮಾನವೀಯತೆ ಮೆರೆದಿದೆ. ಕಳೆದ ಒಂದು ವರ್ಷದಲ್ಲಿ 209 ಮೃತ ನೌಕರರ ಅವಲಂಬಿತರಿಗೆ ನೌಕರಿ ನೀಡಲಾಗಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 1000 ಮೃತಾವಲಂಬಿತರಿಗೆ ಉದ್ಯೋಗ ನೀಡಲಾಗಿದೆ. ಈ ಮೂಲಕ ಒಟ್ಟಾರೆ 2500 ಹುದ್ದೆಗಳ ನೇಮಕಾತಿಯನ್ನು ನಿಗಮ ಪೂರೈಸಿದೆ.
ಸೌಜನ್ಯ ಸೇವೆಗಳು ಮತ್ತು ಸಿಬ್ಬಂದಿ ಕಲ್ಯಾಣ ಯೋಜನೆಗಳು
ಸಚಿವರು ನೂತನ ನೇಮಕಗೊಂಡ ಚಾಲನಾ ಸಿಬ್ಬಂದಿಗೆ ನಿಗಮವನ್ನು ಉಳಿಸಿ, ಬೆಳೆಸಿ, ಸೌಜನ್ಯದಿಂದ ಸೇವೆ ಸಲ್ಲಿಸಲು ಸೂಚಿಸಿದರು. ವಿಶೇಷವಾಗಿ ಮಹಿಳಾ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ವಿನಯಭರಿತವಾಗಿ ವರ್ತಿಸುವ ಅಗತ್ಯತೆಯನ್ನು ಒತ್ತಿಹೇಳಿದರು. ಅಪಘಾತ ಸಂಭವದ ಸಾಧ್ಯತೆಗಳ ಹಿನ್ನಲೆಯಲ್ಲಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ಶಕ್ತಿ ಯೋಜನೆ ಯಶಸ್ವಿ
ರಾಜ್ಯ ಸರ್ಕಾರ ಜಾರಿಗೆ ತಂದ ಶಕ್ತಿ ಗ್ಯಾರಂಟಿ ಯೋಜನೆಯು ಈವರೆಗೆ 2 ವರ್ಷಗಳನ್ನು ಪೂರೈಸಿದ್ದು, 478 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದರ ಮೌಲ್ಯ ರೂ. 12,092 ಕೋಟಿ ಆಗಿದೆ.
ಸಿಬ್ಬಂದಿಗೆ ಭದ್ರತೆ ನೀಡಿದ ವಿಮಾ ಯೋಜನೆಗಳು
- ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆ: ಕರ್ತವ್ಯದ ವೇಳೆ ಅಥವಾ ಹೊರತಾಗಿಯೂ ನಡೆದ ಅಪಘಾತಗಳಲ್ಲಿ ಸಾವಿಗೀಡಾದ ನೌಕರರ ಕುಟುಂಬಗಳಿಗೆ ರೂ. 1 ಕೋಟಿ ಪರಿಹಾರ ನೀಡಲಾಗುತ್ತಿದೆ. ಇದುವರೆಗೆ 26 ಕುಟುಂಬಗಳಿಗೆ ಒಟ್ಟು ರೂ. 26 ಕೋಟಿ ಪರಿಹಾರ ವಿತರಿಸಲಾಗಿದೆ.
- ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ: ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮುಂತಾದ ಕಾರಣಗಳಿಂದ ನಿಧನರಾದ ನೌಕರರ ಕುಟುಂಬಗಳಿಗೆ ಈ ಯೋಜನೆಯಡಿ ರೂ. 10 ಲಕ್ಷ ಪರಿಹಾರ ನೀಡಲಾಗುತ್ತಿದೆ. 2023ರ ನವೆಂಬರ್ 1ರಿಂದ ಜಾರಿಗೆ ಬಂದ ಈ ಯೋಜನೆಯಡಿಯಲ್ಲಿ 125 ಪ್ರಕರಣಗಳಿಗೆ ಒಟ್ಟು ರೂ. 12.5 ಕೋಟಿ ಪರಿಹಾರ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕಿ ಡಾ. ನಂದಿನಿ ದೇವಿ ಕೆ., ಹಾಗೂ ಇತರ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
Post Comment